- Kannada News Photo gallery Cricket photos Tilak Varma on verge of creating history in ind vs Eng 1st t20i
ಹ್ಯಾಟ್ರಿಕ್ ಸೆಂಚುರಿ: ವಿಶ್ವ ದಾಖಲೆಯ ಹೊಸ್ತಿಲಲ್ಲಿ ತಿಲಕ್ ವರ್ಮಾ
India vs England, 1st T20I: ಟಿ20 ಕ್ರಿಕೆಟ್ ಇತಿಹಾಸದಲ್ಲಿ ಯಾವುದೇ ಬ್ಯಾಟರ್ ಹ್ಯಾಟ್ರಿಕ್ ಸೆಂಚುರಿ ಸಿಡಿಸಿಲ್ಲ. ಇದೀಗ ಅಂತಹದೊಂದು ಅಪರೂಪದ ವಿಶ್ವ ದಾಖಲೆ ಬರೆಯುವ ಅವಕಾಶ ಟೀಮ್ ಇಂಡಿಯಾದ ಯುವ ದಾಂಡಿಗ ತಿಲಕ್ ವರ್ಮಾ ಮುಂದಿದೆ. ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ತಿಲಕ್ ಸೆಂಚುರಿ ಸಿಡಿಸಿದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ.
Updated on: Jan 22, 2025 | 11:53 AM

ಭಾರತ ಮತ್ತು ಇಂಗ್ಲೆಂಡ್ ನಡುವಣ ಬಹುನಿರೀಕ್ಷಿತ ಟಿ20 ಸರಣಿಯು ಇಂದಿನಿಂದ (ಜ.22) ಆರಂಭವಾಗಲಿದೆ. ಐದು ಪಂದ್ಯಗಳ ಈ ಸರಣಿಯ ಮೊದಲ ಪಂದ್ಯವು ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಯುವ ದಾಂಡಿಗ ತಿಲಕ್ ವರ್ಮಾ ಶತಕ ಸಿಡಿಸಿದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ.

ಹೌದು, ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಯಾವುದೇ ಬ್ಯಾಟರ್ ಸತತ 3 ಶತಕಗಳನ್ನು ಸಿಡಿಸಿಲ್ಲ. ಇದೀಗ ಅಂತಹದೊಂದು ಅಪರೂಪದ ದಾಖಲೆ ಬರೆಯುವ ಅವಕಾಶ ತಿಲಕ್ ವರ್ಮಾ ಮುಂದಿದೆ. ಏಕೆಂದರೆ ಇದಕ್ಕೂ ಮುನ್ನ ನಡೆದ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ತಿಲಕ್ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿದ್ದರು.

ಸೆಂಚುರಿಯನ್ ಸ್ಪೋರ್ಟ್ಪಾರ್ಕ್ ಮೈದಾನದಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ತಿಲಕ್ ವರ್ಮಾ 56 ಎಸೆತಗಳಲ್ಲಿ 7 ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ ಅಜೇಯ 107 ರನ್ ಬಾರಿಸಿ ಮಿಂಚಿದ್ದರು.

ಇದಾದ ಬಳಿಕ ಜೋಹಾನ್ಸ್ಬರ್ಗ್ನ ವಾಂಡರರ್ಸ್ ಮೈದಾನದಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ ತಿಲಕ್ ಕೇವಲ 47 ಎಸೆತಗಳಲ್ಲಿ 10 ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ ಅಜೇಯ 120 ರನ್ ಬಾರಿಸಿದ್ದರು. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿ ದಾಖಲೆ ಬರೆದಿದ್ದರು.

ಇದೀಗ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹ್ಯಾಟ್ರಿಕ್ ಸೆಂಚುರಿ ಸಿಡಿಸಿದ ವಿಶ್ವ ಮೊದಲ ಆಟಗಾರ ಎನಿಸಿಕೊಳ್ಳಲು ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ತಿಲಕ್ ವರ್ಮಾ ಮೂರಂಕಿ ಮೊತ್ತ ಗಳಿಸಬೇಕು. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಯಾರಿಂದಲೂ ಸಾಧ್ಯವಾಗದ ಅಪರೂಪದ ದಾಖಲೆಗೆ ತಿಲಕ್ ವರ್ಮಾ ತಿಲಕವಿಡಲಿದ್ದಾರಾ ಕಾದು ನೋಡಬೇಕಿದೆ.



















