ಡಿಸೆಂಬರ್ 1, 2020 ರ ಬಳಿಕ ಫಾಫ್ ಡುಪ್ಲೆಸಿಸ್ (Faf du Plessis) ಸೌತ್ ಆಫ್ರಿಕಾ ಪರ ಯಾವುದೇ ಟಿ20 ಪಂದ್ಯವಾಡಿಲ್ಲ. ಕಳೆದ 2 ಟಿ20 ವಿಶ್ವಕಪ್ನಲ್ಲೂ ಕಣಕ್ಕಿಳಿದಿರಲಿಲ್ಲ. ಇದೀಗ ಫಾಫ್ ಡುಪ್ಲೆಸಿಸ್ಗೆ ಕಂಬ್ಯಾಕ್ ಮಾಡಲು ಸೌತ್ ಆಫ್ರಿಕಾ ಕ್ರಿಕೆಟ್ ಬೋರ್ಡ್ ರಹದಾರಿ ಒದಗಿಸಿದೆ. ಅದು ಕೂಡ ಇಂಡಿಯನ್ ಪ್ರೀಮಿಯರ್ ಲೀಗ್ ಮೂಲಕ ಎಂಬುದು ವಿಶೇಷ.
ಅಂದರೆ ಮುಂಬರುವ ಟಿ20 ವಿಶ್ವಕಪ್ಗಾಗಿ ಫಾಫ್ ಡುಪ್ಲೆಸಿಸ್ ಅವರನ್ನು ಆಯ್ಕೆಗೆ ಪರಿಗಣಿಸಲಾಗುವುದು ಎಂದು ಸೌತ್ ಆಫ್ರಿಕಾ ತಂಡದ ಕೋಚ್ ರಾಬ್ ವಾಲ್ಟರ್ ತಿಳಿಸಿದ್ದಾರೆ. ಕಳೆದ ಕೆಲ ವರ್ಷಗಳಿಂದ ಫಾಫ್ ಟಿ20 ಕ್ರಿಕೆಟ್ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಅವರು ಮುಂದಿನ ವಿಶ್ವಕಪ್ಗೆ ಪರಿಗಣನೆಯಲ್ಲಿದ್ದಾರೆ ಎಂದು ವಾಲ್ಟರ್ ಹೇಳಿದ್ದಾರೆ.
ಇತ್ತ ಫಾಫ್ ಡುಪ್ಲೆಸಿಸ್ ಕೂಡ ರಾಷ್ಟ್ರೀಯ ತಂಡದಲ್ಲಿ ಕೊನೆಯ ಬಾರಿ ಕಾಣಿಸಿಕೊಳ್ಳಲು ಉತ್ಸುಕರಾಗಿದ್ದಾರೆ. ಆದರೆ ಅವರ ಕಂಬ್ಯಾಕ್ ಅಂದುಕೊಂಡಷ್ಟು ಸುಲಭವಲ್ಲ. ಏಕೆಂದರೆ ಈಗಾಗಲೇ ಸೌತ್ ಆಫ್ರಿಕಾ ಟಿ20 ತಂಡದಲ್ಲಿ ಯುವ ಆಟಗಾರರ ದಂಡೇ ಕಾಣಿಸಿಕೊಂಡಿದೆ. ಹೀಗಾಗಿ ಫಾಫ್ಗೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಇರುವ ಏಕೈಕ ದಾರಿ ಐಪಿಎಲ್.
ಅಂದರೆ ಮುಂಬರುವ ಐಪಿಎಲ್ನಲ್ಲಿ ಆರ್ಸಿಬಿ ಪರ ಭರ್ಜರಿ ಪ್ರದರ್ಶನ ನೀಡಿದರೆ ಫಾಫ್ ಡುಪ್ಲೆಸಿಸ್ ಅವರಿಗೆ ಟಿ20 ತಂಡದ ಬಾಗಿಲು ತೆರೆಯಲಿದೆ. ಇದನ್ನೇ ಮಾನದಂಡವಾಗಿಟ್ಟುಕೊಂಡು ಅನುಭವಿ ಆಟಗಾರನನ್ನು ತಂಡಕ್ಕೆ ಆಯ್ಕೆ ಮಾಡಲು ಸೌತ್ ಆಫ್ರಿಕಾ ಕ್ರಿಕೆಟ್ ಬೋರ್ಡ್ ಪ್ಲ್ಯಾನ್ ರೂಪಿಸಿದೆ.
ಹೀಗಾಗಿ ಈ ಬಾರಿಯ ಐಪಿಎಲ್ ಮೂಲಕ ಫಾಫ್ ಡುಪ್ಲೆಸಿಸ್ ಅವರ ಟಿ20 ವಿಶ್ವಕಪ್ ಭವಿಷ್ಯ ನಿರ್ಧಾರವಾಗಲಿದೆ. ಪ್ರಸ್ತುತ ಆರ್ಸಿಬಿ ತಂಡದ ನಾಯಕರಾಗಿರುವ ಡುಪ್ಲೆಸಿಸ್ ಇತ್ತೀಚೆಗೆ ಮುಕ್ತಾಯಗೊಂಡ ಸೌತ್ ಆಫ್ರಿಕಾ ಟಿ20 ಲೀಗ್ನಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ್ದರು.
ಅದರಲ್ಲೂ ಕಳೆದ ಸೀಸನ್ ಐಪಿಎಲ್ನಲ್ಲಿ 14 ಪಂದ್ಯಗಳಿಂದ ಒಟ್ಟು 730 ರನ್ ಕಲೆಹಾಕಿದ್ದರು. ಅದರಂತೆ ಈ ಬಾರಿ ಕೂಡ ಆರ್ಸಿಬಿ ಪರ ಅಬ್ಬರಿಸಿದರೆ ಫಾಫ್ ಡುಪ್ಲೆಸಿಸ್ಗೆ ಸೌತ್ ಆಫ್ರಿಕಾ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗುವುದು ಖಚಿತ ಎಂದೇ ಹೇಳಬಹುದು.