Updated on: Oct 15, 2022 | 12:15 PM
ಟಿ20 ವಿಶ್ವಕಪ್ ಆರಂಭವಾಗಲು ಕ್ಷಣಗಣನೆ ಆರಂಭವಾಗಿದೆ. ಆದರೆ ಕೆಲವು ತಂಡಗಳು ಮಾತ್ರ ತಂಡದ ಸ್ಟಾರ್ ಆಟಗಾರರ ಇಂಜುರಿ ಸಮಸ್ಯೆಯಿಂದ ಇನ್ನೂ ಹೊರಬಂದಿಲ್ಲ. ಟೀಂ ಇಂಡಿಯಾ ಈಗಾಗಲೇ ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ ಮತ್ತು ದೀಪಕ್ ಚಹಾರ್ ಅವರಂತಹ ಬೌಲರ್‌ಗಳನ್ನು ಇಂಜುರಿಯಿಂದ ಕಳೆದುಕೊಂಡಿದ್ದರೆ, ಇತರ ತಂಡಗಳು ಸಹ ತೊಂದರೆ ಎದುರಿಸುತ್ತಿವೆ. ಈ ಸಮಸ್ಯೆಗೆ ಈಗ ಪಾಕಿಸ್ತಾನ ತಂಡ ಹೊಸದಾಗಿ ಸೇರ್ಪಡೆಗೊಂಡಿದ್ದು, ತಂಡದ ಸ್ಟಾರ್ ಸ್ಪಿನ್ನರ್ ಇಂಜುರಿಯಿಂದಾಗಿ ಟಿ20 ವಿಶ್ವಕಪ್ ತಂಡದಿಂದ ಹೊರಗುಳಿದಿದ್ದಾರೆ.
ಟಿ20 ವಿಶ್ವಕಪ್‌ಗಾಗಿ ಪಾಕಿಸ್ತಾನ ಟಿ20 ವಿಶ್ವಕಪ್ ತಂಡದ 15 ಸದಸ್ಯರ ಪಟ್ಟಿಯಲ್ಲಿ ಆಯ್ಕೆಯಾಗಿದ್ದ ಲೆಗ್ ಸ್ಪಿನ್ನರ್ ಉಸ್ಮಾನ್ ಖಾದಿರ್ ಹೆಬ್ಬೆರಳಿನ ಮುರಿತದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಈ ಕಾರಣದಿಂದಾಗಿ ಅವರನ್ನು ಮುಖ್ಯ ತಂಡದ ಬದಲಿಗೆ ಮೀಸಲು ಆಟಗಾರರ ಪಟ್ಟಿಗೆ ಸೇರಿಸಲಾಗಿದೆ.
ಆದಾಗ್ಯೂ, ಖಾದಿರ್ ಬದಲಿಗೆ ಪ್ರಬಲ ಬ್ಯಾಟ್ಸ್‌ಮನ್ ಫಖರ್ ಜಮಾನ್ ಅವರನ್ನು ಮೀಸಲು ಆಟಗಾರರ ಪಟ್ಟಿಯಿಂದ ಮುಖ್ಯ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಏಷ್ಯಾಕಪ್‌ನಲ್ಲಿ ಗಾಯಗೊಂಡಿದ್ದರಿಂದ ಫಖರ್ ಜಮಾನ್ ಅವರನ್ನು ಮುಖ್ಯ ತಂಡದ ಬದಲಿಗೆ ಮೀಸಲು ಆಟಗಾರರ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಲಂಡನ್‌ನಲ್ಲಿ ತಮ್ಮ ಗಾಯಕ್ಕೆ ಚಿಕಿತ್ಸೆ ಪಡೆದುಕೊಂಡಿರುವ ಜಮಾನ್, ಪೂರ್ಣ ಫಿಟ್ ಆಗಿದ್ದು, ಈಗ ತಂಡಕ್ಕೆ ಎಂಟ್ರಿಕೊಟ್ಟಿದ್ದಾರೆ.
ಪ್ರಮುಖವಾಗಿ ಆರಂಭಿಕ ಜೋಡಿ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಮೇಲೆ ಅವಲಂಬಿತವಾಗಿರುವ ಪಾಕಿಸ್ತಾನಿ ತಂಡದ ಬ್ಯಾಟಿಂಗ್ ಲೈನ್ ಅಪ್ ಫಖರ್ ಜಮಾನ್ ಆಗಮನದಿಂದ ಮತ್ತಷ್ಟು ಬಲಗೊಳ್ಳಲಿದೆ. ಶಾನ್ ಮಸೂದ್ ಆಗಮನದಿಂದಲೂ ತಂಡದ ಬ್ಯಾಟಿಂಗ್ ಹೆಚ್ಚು ಬಲಿಷ್ಠವಾಗಿರಲಿಲ್ಲ, ಇಂತಹ ಪರಿಸ್ಥಿತಿಯಲ್ಲಿ ಫಖರ್ ಆಡುವ ಇಲೆವೆನ್‌ಗೆ ಮರಳುವುದು ಖಚಿತವಾಗಿದೆ.