
ಟೀಂ ಇಂಡಿಯಾ ನಾಯಕತ್ವದ ಕಾರಣದಿಂದ ಆರಂಭವಾದ ವಿವಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ಮೀರಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ವರೆಗೆ ಹೋಗಿದೆ. ವಿರಾಟ್ ಕೊಹ್ಲಿ, ದಕ್ಷಿಣ ಆಫ್ರಿಕಾಕ್ಕೆ ತೆರಳುವ ಮೊದಲು ಪತ್ರಿಕಾಗೋಷ್ಠಿಯಲ್ಲಿ, ಟಿ 20 ನಾಯಕತ್ವವನ್ನು ಬಿಟ್ಟುಕೊಡದಂತೆ ವಿರಾಟ್‌ಗೆ ಕೇಳಿಕೊಂಡಿದ್ದೇನೆ ಎಂದು ಗಂಗೂಲಿ ಹೇಳಿದ್ದ ಹೇಳಿಕೆಯನ್ನು ತಳ್ಳಿಹಾಕಿದರು. ಹೀಗಾಗಿ ಇಬ್ಬರ ನಡುವೆ ಜಗಳ ಹೆಚ್ಚುತ್ತಿದೆ. ಆದರೆ, ಭಾರತೀಯ ಕ್ರಿಕೆಟ್‌ನಲ್ಲಿ ಇಂತಹ ವಿವಾದ ನಡೆಯುತ್ತಿರುವುದು ಇದೇ ಮೊದಲಲ್ಲ.

2005 ರಲ್ಲಿ, ತಂಡದ ನಾಯಕತ್ವ ಸೌರವ್ ಗಂಗೂಲಿ ಕೈಯಲ್ಲಿದ್ದಾಗ, ಆಗ ಮುಖ್ಯ ಕೋಚ್ ಗ್ರೆಗ್ ಚಾಪೆಲ್ ವಿವಾದದಲ್ಲಿ ಸಿಲುಕಿದ್ದರು. ಗ್ರೆಗ್ ಚಾಪೆಲ್ ಗಂಗೂಲಿಯನ್ನು ತಂಡದಿಂದ ಕೈಬಿಟ್ಟು ನಾಯಕತ್ವವನ್ನು ರಾಹುಲ್ ದ್ರಾವಿಡ್‌ಗೆ ನೀಡಲಾಯಿತು. ಇದರ ಪರಿಣಾಮ ತಂಡದ ಆಟದ ಮೇಲೆ ಗೋಚರಿಸಿತು ಮತ್ತು ದ್ರಾವಿಡ್ ನಾಯಕತ್ವದಲ್ಲಿ ತಂಡವು 2007 ರ ವಿಶ್ವಕಪ್‌ನ ನಾಕೌಟ್ ಹಂತದಿಂದ ಹೊರಗುಳಿಯಬೇಕಾಯಿತು.

ಮಹೇಂದ್ರ ಸಿಂಗ್ ಧೋನಿ ಭಾರತಕ್ಕಾಗಿ ಅನೇಕ ದೊಡ್ಡ ಮತ್ತು ಪ್ರಮುಖ ಪಂದ್ಯಾವಳಿಗಳನ್ನು ಗೆದ್ದು, ಚಾಂಪಿಯನ್ ಪಟ್ಟಕ್ಕೇರಿಸಿದರು. ಆದರೆ ಅವರು ಎಂದಿಗೂ ಹಿರಿಯ ಆಟಗಾರರೊಂದಿಗೆ ಉತ್ತಮ ಬಾಂಧವ್ಯ ಹೊಂದಿರಲಿಲ್ಲ. ಫಿಟ್ ಆಗಿಲ್ಲದ ಕಾರಣ ಮತ್ತು ನಿಧಾನಗತಿಯ ಫೀಲ್ಡಿಂಗ್‌ಗಾಗಿ ಧೋನಿ ವೀರೇಂದ್ರ ಸೆಹ್ವಾಗ್ ಅವರನ್ನು ತಂಡದಿಂದ ಕೈಬಿಟ್ಟರು. ಜೊತೆಗೆ ಸ್ಲೋ ಫೀಲ್ಡರ್ ಎಂದು ನೇರವಾಗಿ ಪತ್ರಿಕಾಗೋಷ್ಠಿಯಲ್ಲಿ ಧೋನಿ ಸೆಹ್ವಾಗ್ ಬಗ್ಗೆ ಹೇಳಿಕೆ ನೀಡಿದ್ದರು.

ಯುವರಾಜ್ ಸಿಂಗ್ ಮತ್ತು ಮಹೇಂದ್ರ ಸಿಂಗ್ ಧೋನಿ ನಡುವಿನ ಭಿನ್ನಾಭಿಪ್ರಾಯದ ಸುದ್ದಿ ಹಲವು ಬಾರಿ ಸ್ಫೋಟಗೊಂಡಿತ್ತು. ಆದರೆ ಯಾರೂ ಬಹಿರಂಗವಾಗಿ ಏನನ್ನೂ ಹೇಳಲಿಲ್ಲ. ಧೋನಿಯಿಂದಾಗಿ ಹಲವು ಆಟಗಾರರು ತಂಡದಿಂದ ಹೊರ ಹೋಗಿದ್ದಾರೆ ಎಂದು ಯುವರಾಜ್ ತಂದೆ ಮಾಜಿ ಕ್ರಿಕೆಟಿಗ ಯೋಗರಾಜ್ ಸಿಂಗ್ ಹೇಳಿದ್ದರು. ಯುವರಾಜ್ ವೃತ್ತಿಜೀವನದ ಅಂತ್ಯಕ್ಕೆ ಧೋನಿ ಕಾರಣ ಎಂದು ಅವರು ಆರೋಪಿಸಿದರು.

2016ರಲ್ಲಿ ಅನಿಲ್ ಕುಂಬ್ಳೆ ತಂಡದ ಮುಖ್ಯ ಕೋಚ್ ಜವಾಬ್ದಾರಿ ವಹಿಸಿಕೊಂಡಾಗ ಮಹೇಂದ್ರ ಸಿಂಗ್ ಧೋನಿ ತಂಡದ ನಾಯಕರಾಗಿದ್ದರು. ಮುಂದಿನ ವರ್ಷವೇ ಧೋನಿ ಈ ಜವಾಬ್ದಾರಿಯನ್ನು ಕೊಹ್ಲಿಗೆ ನೀಡಿದರು. ಆದರೆ, ಕೊಹ್ಲಿ ಮತ್ತು ಕುಂಬ್ಳೆಗೆ ಹೊಂದಾಣಿಕೆಯಾಗಲಿಲ್ಲ. ಕುಂಬ್ಳೆ ಅವರ ಕೋಚಿಂಗ್ ಶೈಲಿಯಿಂದ ಕೊಹ್ಲಿಗೆ ಸಮಸ್ಯೆ ಉಂಟಾಗಿದ್ದು, ಈ ಕಾರಣದಿಂದ ಕುಂಬ್ಳೆ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳದೆ ಕೊಂಚಿಗ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವಿನ ವಿವಾದಗಳ ಸುದ್ದಿ ಬಹಳ ದಿನಗಳಿಂದ ಕೇಳಿ ಬರುತ್ತಿದೆ. ಆದರೆ ಇಬ್ಬರೂ ಸಹ ತಂಡದ ಸ್ಟಾರ್ ಬ್ಯಾಟ್ಸ್‌ಮನ್. ಆದಾಗ್ಯೂ, ಅವರಿಬ್ಬರೂ ಪರಸ್ಪರ ಪೈಪೋಟಿ ಅಥವಾ ವಿವಾದಗಳ ವರದಿಗಳನ್ನು ಎಂದಿಗೂ ನಿರಾಕರಿಸಲಿಲ್ಲ. ಜೊತೆಗೆ ಯಾವಾಗಲೂ ಎಲ್ಲವೂ ಚೆನ್ನಾಗಿದೆ ಎಂದು ಹೇಳಿಕೊಂಡು ಬರುತ್ತಿದ್ದಾರೆ.