‘ನಿನ್ನಂತಹ ಅಭಿಮಾನಿಯ ಅಗತ್ಯವಿಲ್ಲ’; ಸೆಹ್ವಾಗ್ ವಿರುದ್ಧ ಗಂಭೀರ್ ಆರೋಪ ಹೊರಿಸಿದ ಗ್ಲೆನ್ ಮ್ಯಾಕ್ಸ್‌ವೆಲ್
Glenn Maxwell Accuses Sehwag: ಗ್ಲೆನ್ ಮ್ಯಾಕ್ಸ್‌ವೆಲ್ ತಮ್ಮ ಆತ್ಮಕಥೆಯಲ್ಲಿ 2017ರ ಐಪಿಎಲ್ನಲ್ಲಿ ವೀರೇಂದ್ರ ಸೆಹ್ವಾಗ್ ಅವರೊಂದಿಗಿನ ಜಗಳವನ್ನು ಉಲ್ಲೇಖಿಸಿದ್ದಾರೆ. ಅದರಂತೆ ಪಂಜಾಬ್ ತಂಡದ ನಾಯಕನಾಗಿದ್ದ ಮ್ಯಾಕ್ಸ್‌ವೆಲ್ ಅವರನ್ನು ಪತ್ರಿಕಾಗೋಷ್ಠಿಯಿಂದ ತಡೆದು, ವಾಟ್ಸಾಪ್ ಗ್ರೂಪ್‌ನಿಂದ ತೆಗೆದುಹಾಕಿದರು. ಅಲ್ಲದೆ ಪತ್ರಿಕಾಗೋಷ್ಠಿಯಲ್ಲಿ ಸೆಹ್ವಾಗ್ ನನ್ನನ್ನು ಜರಿದು ಮಾತನಾಡಿದ್ದರು ಎಂದು ಮ್ಯಾಕ್ಸ್‌ವೆಲ್ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
1 / 9
18ನೇ ಆವೃತ್ತಿಯ ಐಪಿಎಲ್ಗೆ ಸಂಬಂಧಿಸಿದಂತೆ ಈಗಾಗಲೇ ಕೆಲಸಗಳು ಆರಂಭವಾಗಿವೆ. ಅದರಂತೆ ಈ ಟೂರ್ನಿ ಆರಂಭಕ್ಕೂ ಮುನ್ನ ಮೆಗಾ ಹರಾಜು ನಡೆಯಲ್ಲಿದೆ. ಆದರೆ ಈ ನಡುವೆ ಐಪಿಎಲ್ಗೆ ಸಂಬಂಧಿಸಿದ ವಿಚಾರವೊಂದು ಹೊಸ ವಿವಾದವನ್ನು ಹುಟ್ಟುಹಾಕಿದ್ದು, ಪ್ರಸ್ತುತ ಆರ್ಸಿಬಿಯಲ್ಲಿರುವ ಆಸ್ಟ್ರೇಲಿಯಾ ತಂಡದ ಗ್ಲೆನ್ ಮ್ಯಾಕ್ಸ್‌ವೆಲ್, ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ವಿರುದ್ಧ ಗಂಭೀರ ಆರೋಪವೊಂದನ್ನು ಹೊರಿಸಿದ್ದಾರೆ.
2 / 9
ವಾಸ್ತವವಾಗಿ ಪ್ರತಿ ಐಪಿಎಲ್ ಸೀಸನ್ನಲ್ಲೂ ಒಂದಿಲ್ಲೊಂದು ವಿವಾದಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಆದರೆ ಆ ವಿವಾದಗಳು ಹೆಚ್ಚು ಕಾಲ ಉಳಿಯುವುದಿಲ್ಲ. ಆದರೀಗ ಆಸ್ಟ್ರೇಲಿಯಾ ತಂಡದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ತಮ್ಮ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿರುವ ಐಪಿಎಲ್ ಪಂದ್ಯಾವಳಿಯ ವೇಳೆ ನಡೆದ ಘಟನೆಯೊಂದು ಇದೀಗ ಹೊಸ ವಿವಾದ ಕಿಡಿಯನ್ನು ಹೊತ್ತಿಸಿದೆ.
3 / 9
ಪ್ರಸ್ತುತ ಐಪಿಎಲ್ನಲ್ಲಿ ಆರ್ಸಿಬಿ ಪರ ಆಡುತ್ತಿರುವ ಗ್ಲೆನ್ ಮ್ಯಾಕ್ಸ್‌ವೆಲ್, ‘ಗ್ಲೆನ್ ಮ್ಯಾಕ್ಸ್‌ವೆಲ್ - ದಿ ಶೋಮ್ಯಾನ್' ಎಂಬ ಹೆಸರಿನಲ್ಲಿ ತಮ್ಮ ಆತ್ಮಚರಿತ್ರೆಯನ್ನು ಹೊರತಂದಿದ್ದಾರೆ. ಈ ಪುಸ್ತಕದ ಕೆಲ ಭಾಗಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಅದರಲ್ಲಿ 2017 ರ ಐಪಿಎಲ್ ವೇಳೆ ನಡೆದ ಘಟನೆಯೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
4 / 9
ವಾಸ್ತವವಾಗಿ ಮ್ಯಾಕ್ಸ್‌ವೆಲ್ 2014 ರಲ್ಲಿ ಕಿಂಗ್ಸ್ XI ಪಂಜಾಬ್ (ಈಗ ಪಂಜಾಬ್ ಕಿಂಗ್ಸ್) ತಂಡದ ಭಾಗವಾಗಿದ್ದರು. ಆ ವೇಳೆ ಪಂಜಾಬ್ ತಂಡದಲ್ಲಿ ಅವರ ಪ್ರದರ್ಶನ ಆರಂಭದಲ್ಲಿ ಅತ್ಯುತ್ತಮವಾಗಿತ್ತು. ಹೀಗಾಗಿ ಅವರನ್ನು 2017 ರ ಆವೃತ್ತಿಯಲ್ಲಿ ತಂಡದ ನಾಯಕರನ್ನಾಗಿ ನೇಮಿಸಲಾಯಿತು. ಅದೇ ಸೀಸನ್ನಲ್ಲಿ ಮಾಜಿ ಪಂಜಾಬ್ ನಾಯಕ ವೀರೇಂದ್ರ ಸೆಹ್ವಾಗ್ ಅವರನ್ನು ತಂಡದ ಕ್ರಿಕೆಟ್ ನಿರ್ದೇಶಕರಾಗಿ ನೇಮಿಸಲಾಯಿತು.
5 / 9
ಆ ಆವೃತ್ತಿಯಲ್ಲಿ ಪಂಜಾಬ್ ತಂಡ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ವಿರುದ್ಧದ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಕೇವಲ 73 ರನ್‌ಗಳಿಗೆ ಆಲೌಟ್ ಆಗಿತ್ತು. ಆ ಬಳಿಕ ಪಂದ್ಯವನ್ನು 9 ವಿಕೆಟ್‌ಗಳಿಂದ ಕಳೆದುಕೊಂಡಿತು. ಇದರಿಂದಾಗಿ ಪಂಜಾಬ್ ತಂಡ ಕೇವಲ 2 ಅಂಕಗಳ ಅಂತರದಿಂದ ಪ್ಲೇಆಫ್ಗೇರುವ ಅವಕಾಶವನ್ನು ಕಳೆದುಕೊಂಡಿತ್ತು.
6 / 9
ಆ ಪಂದ್ಯದ ಬಗ್ಗೆ ತಮ್ಮ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿರುವ ಮ್ಯಾಕ್ಸ್‌ವೆಲ್, ಆ ವೇಳೆ ನಾನು ತಂಡದ ನಾಯಕನಾಗಿದ್ದ ಕಾರಣ, ಆ ಪಂದ್ಯ ಮುಗಿದ ಬಳಿಕ ನಾನು ಪತ್ರಿಕಾಗೋಷ್ಠಿಗೆ ಹೋಗಿ ಮಾಧ್ಯಮದ ಪ್ರಶ್ನೆಗಳನ್ನು ಎದುರಿಸಲು ನಿರ್ಧರಿಸಿದ್ದೆ. ಆದರೆ ಸೆಹ್ವಾಗ್ ನನ್ನನ್ನು ತಡೆದು, ನಾನೇ ಪತ್ರಿಕಾಗೋಷ್ಠಿಗೆ ಹೋಗುತ್ತೇನೆ ಎಂದು ಹೇಳಿದರು.
7 / 9
ಹೀಗಾಗಿ ನಾನು ಪಂದ್ಯದ ನಂತರ ತಂಡದ ಬಸ್ ಏರಿ ಹೋಟೆಲ್ನತ್ತ ಹೊರಟ್ಟಿದೆ. ಆದರೆ ಅಷ್ಟರಲ್ಲಾಗಲೇ ನನ್ನನ್ನು ತಂಡದ ಪ್ರಮುಖ ವಾಟ್ಸಾಪ್ ಗ್ರೂಪ್‌ನಿಂದ ತೆಗೆದುಹಾಕಲಾಯಿತು. ಇಷ್ಟೇ ಅಲ್ಲ, ಪತ್ರಿಕಾಗೋಷ್ಠಿಯನ್ನುದ್ದೇಶಿ ಮಾತನಾಡಿದ್ದ ಸೆಹ್ವಾಗ್ ನನ್ನ ಮೇಲೆ ಕೋಪಗೊಂಡಿದಲ್ಲದೆ, ನಾನು ನಾಯಕನಾಗಿ ಜವಾಬ್ದಾರಿಯನ್ನು ತೆಗೆದುಕೊಳ್ಳಲಿಲ್ಲ ಎಂದು ನನ್ನ ಮೇಲೆ ಆರೋಪ ಹೊರಿಸಿದ್ದಾರೆ ಎಂಬ ಸಂದೇಶಗಳು ನನಗೆ ಬರಲಾರಂಭಿಸಿದವು.
8 / 9
ಇದು ನನಗೆ ಆಘಾತಕಾರಿಯಾಗಿತ್ತು. ಸೆಹ್ವಾಗ್ ಅವರ ದೊಡ್ಡ ಅಭಿಮಾನಿಯಾಗಿದ್ದ ನನಗೆ ಸೆಹ್ವಾಗ್ ಅವರ ಹೇಳಿಕೆಗಳಿಂದ ನೋವುಂಟಾಯಿತು. ಹೀಗಾಗಿ ಕೂಡಲೇ ನಾನು, ನಿಮ್ಮ ಹೇಳಿಕೆಗಳು ನನಗೆ ತುಂಬಾ ನೋವುಂಟುಮಾಡಿದೆ. ಇದರಿಂದಾಗಿ ನೀವು ನಿಮ್ಮ ದೊಡ್ಡ ಅಭಿಮಾನಿಯೊಬ್ಬನನ್ನು ಕಳೆದುಕೊಂಡಿದ್ದಿರಿ ಎಂದು ಸಂದೇಶ ಕಳುಹಿಸಿದೆ.
9 / 9
ಆದರೆ ಈ ಸಂದೇಶಕ್ಕೆ ಪ್ರತ್ಯುತ್ತರವಾಗಿ ಸೆಹ್ವಾಗ್, ‘ನಿಮ್ಮಂತಹ ಅಭಿಮಾನಿಯ ಅಗತ್ಯವಿಲ್ಲ' ಎಂದು ನನಗೆ ಮರು ಸಂದೇಶ ಕಳುಹಿಸಿದ್ದರು. ಅಂದಿನಿಂದ ನನ್ನ ಮತ್ತು ಸೆಹ್ವಾಗ್ ನಡುವೆ ಯಾವುದೇ ಮಾತುಕತೆ ನಡೆದಿಲ್ಲ. ಇದಾದ ನಂತರ ನಾನು ತಂಡದ ಮಾಲೀಕರೊಂದಿಗೆ ಮಾತನಾಡಿದ್ದು, ಸೆಹ್ವಾಗ್ ತಂಡದಲ್ಲಿ ಉಳಿದರೆ ನನ್ನನ್ನು ಆಯ್ಕೆ ಮಾಡುವ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ಹೇಳಿದ್ದೆ. ಮುಂದಿನ ಸೀಸನ್ ನಂತರ ಸೆಹ್ವಾಗ್ ಅವರನ್ನು ತಂಡದಿಂದ ಕೈಬಿಡಲಾಯಿತು ಎಂದು ಮ್ಯಾಕ್ಸ್‌ವೆಲ್ ತಮ್ಮ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ.