
ಕಾಂಗರೂ ನಾಡಿನಲ್ಲಿ ಏಕಾಂಗಿಯಾಗಿ ನಿಂತು ಟೀಂ ಇಂಡಿಯಾವನ್ನು ಸೋಲಿನ ದವಡೆಯಿಂದ ಪಾರು ಮಾಡಿದ್ದ ಟೆಸ್ಟ್ ಸ್ಪೆಷಲಿಸ್ಟ್ ಖ್ಯಾತಿಯ ಹನುಮ ವಿಹಾರಿಗೆ ಭಾರತ ತಂಡದಲ್ಲಿ ಹೆಚ್ಚಿನ ಅವಕಾಶ ಸಿಗುತ್ತಿಲ್ಲ. ಆಯ್ಕೆ ಮಂಡಳಿಯಿಂದ ತೀರ ನಿರ್ಲಕ್ಷ್ಯಕ್ಕೆ ಒಳಗಾಗಿರುವ ವಿಹಾರಿ ಇದೀಗ ದೇಶೀ ಕ್ರಿಕೆಟ್ನತ್ತ ಮುಖಮಾಡಿದ್ದಾರೆ. ದೇಶೀ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಭಾರತ ತಂಡಕ್ಕೆ ಮತ್ತೆ ಆಯ್ಕೆಯಾಗುವ ಗುರಿ ಹೊಂದಿರುವ ವಿಹಾರಿ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ.

ಪ್ರಸ್ತುತ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ದಕ್ಷಿಣ ವಲಯ ತಂಡಗಳನ್ನು ಮುನ್ನಡೆಸುತ್ತಿರುವ ಹನುಮ ವಿಹಾರಿ ರಣಜಿ ಟ್ರೋಫಿಯಲ್ಲಿ ಹೊಸ ತಂಡದ ಪರ ಆಡಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಹನುಮ ವಿಹಾರಿ ಇದುವರೆಗೆ ದೇಶೀಯ ಕ್ರಿಕೆಟ್‌ನಲ್ಲಿ ಆಂಧ್ರಪ್ರದೇಶ ತಂಡದ ಪರ ಆಡುತ್ತಿದ್ದರು.

ಆದರೆ ಇದೀಗ ಆಂಧ್ರಪ್ರದೇಶ ತಂಡ ತೊರೆಯಲು ಮುಂದಾಗಿರುವ ವಿಹಾರ ಮಧ್ಯಪ್ರದೇಶ ತಂಡದ ಪರ ಆಡಲು ಸಿದ್ಧರಾಗಿದ್ದಾರೆ. ಆದರೆ ಅದಕ್ಕೂ ಮುನ್ನ ತಂಡವನ್ನು ಬದಲಾಯಿಸಲು ಮುಂದಾಗಿರುವ ವಿಹಾರಿ ಆಂಧ್ರಪ್ರದೇಶ ಕ್ರಿಕೆಟ್ ಮಂಡಳಿಯಿಂದ ಎನ್‌ಒಸಿ ಅಥವಾ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಪಡೆಯಬೇಕಿದೆ.

ಹನುಮ ವಿಹಾರಿ ಹೊಸ ತಂಡ ಸೇರುವುದರೊಂದಿಗೆ ಭಾರತ ಕ್ರಿಕೆಟ್ ತಂಡದಲ್ಲಿ ಪುನರಾಗಮನ ಮಾಡಲು ಪ್ರಯತ್ನಿಸಲಿದ್ದಾರೆ. ಅಲ್ಲದೆ ವರದಿಯ ಪ್ರಕಾರ ಹನುಮ ವಿಹಾರಿ ಕೋಚ್ ಚಂದ್ರಕಾಂತ್ ಪಂಡಿತ್ ಅವರ ಮಾರ್ಗದರ್ಶನದಲ್ಲಿ ಆಡಲು ಬಯಸಿದ್ದಾರೆ. ಇದಕ್ಕಾಗಿ ವಿಹಾರಿ ತಂಡ ಬದಲಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಏತನ್ಮಧ್ಯೆ, ವಿಹಾರಿ ತಂಡವನ್ನು ಬದಲಾಯಿಸಿರುವುದು ಇದೇ ಮೊದಲಲ್ಲ. ತನ್ನ ವೃತ್ತಿಜೀವನವನ್ನು ಹೈದರಾಬಾದ್ ತಂಡದ ಪರ ಪ್ರಾರಂಭಿಸಿದ ವಿಹಾರಿ ನಂತರ 2015-16ರಲ್ಲಿ ಆಂಧ್ರಪ್ರದೇಶ ತಂಡವನ್ನು ಪ್ರತಿನಿಧಿಸಿದ್ದರು. ಆ ಬಳಿಕ 2021-11ರಲ್ಲಿ ಮತ್ತೆ ಹೈದರಾಬಾದ್ ತಂಡಕ್ಕೆ ಸೇರಿಕೊಂಡಿದ್ದರು. ನಂತರ ಕಳೆದ ಸೀಸನ್‌ನಲ್ಲಿ ಆಂಧ್ರಪ್ರದೇಶ ಪರ ಆಡಿದ್ದ ವಿಹಾರಿ ದೇಶೀಯ ಕ್ರಿಕೆಟ್‌ನಲ್ಲಿ ಆಂಧ್ರಪ್ರದೇಶ ತಂಡವನ್ನು ಮುನ್ನಡೆಸಿದ್ದರು.

ವಿಹಾರಿ ಇದುವರೆಗೆ 113 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, ಈ 113 ಪಂದ್ಯಗಳಲ್ಲಿ 54.41 ಸರಾಸರಿಯಲ್ಲಿ 8600 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 23 ಶತಕ ಮತ್ತು 45 ಅರ್ಧಶತಕಗಳು ಸೇರಿವೆ. ಅಲ್ಲದೆ ಟೀಂ ಇಂಡಿಯಾ ಪರ 16 ಟೆಸ್ಟ್ ಪಂದ್ಯಗಳನ್ನಾಡಿರುವ ವಿಹಾರಿ ಈ 16 ಟೆಸ್ಟ್ ಪಂದ್ಯಗಳಲ್ಲಿ 5 ಅರ್ಧಶತಕಗಳ ಸಹಾಯದಿಂದ 839 ರನ್ ಕಲೆ ಹಾಕಿದ್ದಾರೆ.