
Asia Cup 2025: ಏಷ್ಯಾಕಪ್ ಟೂರ್ನಿಯ 17ನೇ ಆವೃತ್ತಿಯ ಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ನಾಳೆ (ಸೆ.28) ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಆದರೆ ಈ ನಿರ್ಣಾಯಕ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ (Hardik Pandya) ಕಣಕ್ಕಿಳಿಯುವುದು ಡೌಟ್.

ಏಕೆಂದರೆ ಶ್ರೀಲಂಕಾ ವಿರುದ್ಧದ ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಹೀಗಾಗಿ ಅರ್ಧದಲ್ಲೇ ಮೈದಾನ ತೊರೆದಿದ್ದರು. ಇದೇ ಕಾರಣದಿಂದ ಅವರು ಪಾಕಿಸ್ತಾನ್ ತಂಡದ ವಿರುದ್ಧ ಕಣಕ್ಕಿಳಿಯುವುದು ಅನುಮಾನ ಎನ್ನಲಾಗುತ್ತಿದೆ.

ಈ ಬಗ್ಗೆ ಮಾಹಿತಿ ನೀಡಿದ ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಮೊರ್ನೆ ಮೊರ್ಕೆಲ್, ಹಾರ್ದಿಕ್ ಪಾಂಡ್ಯ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಶನಿವಾರ ಅಥವಾ ಭಾನುವಾರ ಅವರು ಫೈನಲ್ ಪಂದ್ಯ ಆಡಲಿದ್ದಾರಾ ಎಂಬುದು ನಿರ್ಧಾರವಾಗಲಿದೆ ಎಂದು ತಿಳಿಸಿದ್ದಾರೆ.

ಇತ್ತ ಹಾರ್ದಿಕ್ ಪಾಂಡ್ಯ ಹೊರಗುಳಿದರೆ ನಿರ್ಣಾಯಕ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಕಣಕ್ಕಿಳಿಯುವವರು ಯಾರು ಎಂಬ ಪ್ರಶ್ನೆ ಮೂಡುವುದು ಸಹಜ. ಏಕೆಂದರೆ ಪಾಂಡ್ಯ ಆಲ್ರೌಂಡರ್ ಆಟಗಾರ. ಬ್ಯಾಟಿಂಗ್-ಬೌಲಿಂಗ್ ಮೂಲಕ ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಾ ಬಂದಿದ್ದಾರೆ. ಹೀಗಾಗಿ ಫೈನಲ್ ಪಂದ್ಯದಲ್ಲೂ ಟೀಮ್ ಇಂಡಿಯಾಗೆ ಅಲ್ರೌಂಡರ್ನ ಅವಶ್ಯಕತೆಯಿದೆ.

ಒಂದು ವೇಳೆ ಹಾರ್ದಿಕ್ ಪಾಂಡ್ಯ ಪಾಕಿಸ್ತಾನ್ ವಿರುದ್ಧದ ಪಂದ್ಯದಿಂದ ಹೊರಗುಳಿದರೆ, ಅವರ ಬದಲಿಗೆ ಶಿವಂ ದುಬೆ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳುವುದು ಖಚಿತ. ಏಕೆಂದರೆ ಕಳೆದ 5 ಪಂದ್ಯಗಳಲ್ಲಿ ಶಿವಂ ದುಬೆ ಭಾರತ ತಂಡದ ಪ್ಲೇಯಿಂಗ್ ಇಲೆವೆನ್ನ ಭಾಗವಾಗಿದ್ದರು. ಇದಾಗ್ಯೂ ಶ್ರೀಲಂಕಾ ವಿರುದ್ಧದ ಪಂದ್ಯದಿಂದ ಅವರನ್ನು ಹೊರಗಿಡಲಾಗಿತ್ತು.

ಇದೀಗ ಹಾರ್ದಿಕ್ ಪಾಂಡ್ಯ ಕೊನೆಯ ಪಂದ್ಯಕ್ಕೆ ಅಲಭ್ಯರಾದರೆ, ಶಿವಂ ದುಬೆ ಮತ್ತೆ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಏಕೆಂದರೆ ದುಬೆ ಕೂಡ ವೇಗದ ಬೌಲಿಂಗ್ ಆಲ್ರೌಂಡರ್. ಈ ಮೂಲಕ ಟೀಮ್ ಇಂಡಿಯಾ ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ದುಬೆಯನ್ನು ಬಳಸಿಕೊಳ್ಳಬಹುದು. ಹೀಗಾಗಿ ಪಾಂಡ್ಯ ಫೈನಲ್ ಪಂದ್ಯದಿಂದ ಹೊರಗುಳಿದರೆ ಶಿವಂ ದುಬೆ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವುದು ಖಚಿತ ಎಂದೇ ಹೇಳಬಹುದು.

ಭಾರತ ತಂಡ: ಶುಭ್ಮನ್ ಗಿಲ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ರಿಂಕು ಸಿಂಗ್.
Published On - 12:58 pm, Sat, 27 September 25