
ಟೀಂ ಇಂಡಿಯಾ ಉಪನಾಯಕ ಹಾರ್ದಿಕ್ ಪಾಂಡ್ಯ ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಅದ್ಭುತ ಇನ್ನಿಂಗ್ಸ್ ಆಡುವ ಮೂಲಕ ತಮ್ಮ ಹಳೆಯ ಫಾರ್ಮ್ ಅನ್ನು ಕಂಡುಕೊಂಡಿದ್ದಾರೆ. ಈ ಮೂಲಕ ತನ್ನ ಕಳಪೆ ಫಾರ್ಮ್ ಬಗ್ಗೆ ಟ್ರೋಲ್ ಮತ್ತು ಟೀಕೆಗಳನ್ನು ಮಾಡುತ್ತಿದ್ದವರ ಬಾಯಿ ಮುಚ್ಚಿಸುವ ಕೆಲಸ ಮಾಡಿದ್ದಾರೆ.

ವಾಸ್ತವವಾಗಿ ಕಳೆದ ಕೆಲವು ದಿನಗಳಿಂದ ಹಾರ್ದಿಕ್ ಪಾಂಡ್ಯ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಈ ಬಾರಿಯ ಐಪಿಎಲ್ ಪ್ರಾರಂಭವಾಗುವ ಮೊದಲೇ ಪಾಂಡ್ಯ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಅಲ್ಲದೆ ಲೀಗ್ ಉದ್ದಕ್ಕೂ ಹಾರ್ದಿಕ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್ಗೆ ಒಳಗಾಗಿದ್ದರು. ಇದೀಗ ಪಾಂಡ್ಯ ತಮ್ಮ ಕಷ್ಟದ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.

ಅಭ್ಯಾಸ ಪಂದ್ಯದ ವೇಳೆ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಮಾತನಾಡಿದ ಉಪನಾಯಕ ಹಾರ್ದಿಕ್ ಪಾಂಡ್ಯ, ‘ಹೌದು ಕಳೆದ ಕೆಲವು ದಿನಗಳು ಕಷ್ಟಕರವಾಗಿತ್ತು. ಆದರೆ ನಾನು ಮೊದಲಿನಿಂದಲೂ ಅದೇ ದಿನಚರಿಯನ್ನು ಅನುಸರಿಸಿದ್ದೇನೆ. ಒಳ್ಳೆಯ ಮತ್ತು ಕೆಟ್ಟ ಸಮಯಗಳು ಬರುತ್ತಲೇ ಇರುತ್ತವೆ. ನಾನು ಈ ಮೊದಲು ಅಂತಹ ಹಂತವನ್ನು ಎದುರಿಸಿದ್ದೇನೆ’.

‘ಈ ಬಾರಿಯೂ ನಾನು ಎಲ್ಲದರಿಂದ ಹೊರಬರುತ್ತೇನೆ. ನಾನು ಯಶಸ್ಸನ್ನು ಹೆಚ್ಚಾಗಿ ತಲೆಗೇರಿಸಿಕೊಳ್ಳುವುದಿಲ್ಲ ಅಥವಾ ವೈಫಲ್ಯಗಳಿಂದ ಕುಗ್ಗುವುದಿಲ್ಲ. ನಾನು ಯಾವುದರಿಂದಲೂ ಓಡಿಹೋಗುವುದಿಲ್ಲ. ಬದಲಿಗೆ ಏನೇ ಬಂದರು ಅದನ್ನು ಧೈರ್ಯದಿಂದ ಎದುರಿಸುತ್ತೇನೆ’ ಎಂದಿದ್ದಾರೆ.

ವೃತ್ತಿಜೀವನವದ ಜೊತೆಗೆ ಹಾರ್ದಿಕ್ ತಮ್ಮ ವೈಯಕ್ತಿಕ ಜೀವನದ ಏರಿಳಿತಗಳಿಂದಲೂ ಚರ್ಚೆಯಲ್ಲಿದ್ದಾರೆ. ವಾಸ್ತವವಾಗಿ, ಕಳೆದ ಕೆಲವು ದಿನಗಳಿಂದ, ಹಾರ್ದಿಕ್ ಮತ್ತು ನತಾಶಾ ವಿಚ್ಛೇದನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಆದರೆ, ಹಾರ್ದಿಕ್ ಮತ್ತು ಅವರ ಪತ್ನಿ ನತಾಶಾ ಈ ಬಗ್ಗೆ ಈವರೆಗೆ ಏನನ್ನೂ ಹೇಳಿಲ್ಲ.

ಇನ್ನು ನಿನ್ನೆ ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ತನ್ನ ಏಕೈಕ ಅಭ್ಯಾಸ ಪಂದ್ಯವನ್ನು ಆಡಿತ್ತು. ಈ ಪಂದ್ಯದಲ್ಲಿ ಟೀಂ ಇಂಡಿಯಾ 60 ರನ್‌ಗಳ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಅದ್ಭುತ ಇನ್ನಿಂಗ್ಸ್ ಆಡಿದ ಹಾರ್ದಿಕ್ 23 ಎಸೆತಗಳಲ್ಲಿ 40 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 2 ಬೌಂಡರಿ ಮತ್ತು 4 ಸಿಕ್ಸರ್‌ಗಳು ಸೇರಿದ್ದವು.