
ಭಾರತ ಮತ್ತು ಸೌತ್ ಆಫ್ರಿಕಾ (IND vs SA) ನಡುವಣ ಏಕದಿನ ಸರಣಿ ಮುಕ್ತಾಯದ ಬೆನ್ನಲ್ಲೇ ಉಭಯ ತಂಡಗಳ ನಡುವಣ ಟಿ20 ಸರಣಿ ಶುರುವಾಗಲಿದೆ. ಡಿಸೆಂಬರ್ 9 ರಿಂದ ಆರಂಭವಾಗಲಿರುವ ಈ ಸರಣಿಯ ಮೂಲಕ ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಕಂಬ್ಯಾಕ್ ಮಾಡಲಿದ್ದಾರೆ.

ಏಷ್ಯಾಕಪ್ ಟೂರ್ನಿ ವೇಳೆ ಗಾಯಗೊಂಡಿದ್ದ ಹಾರ್ದಿಕ್ ಪಾಂಡ್ಯ ಆ ಬಳಿಕ ಯಾವುದೇ ಮ್ಯಾಚ್ ಆಡಿರಲಿಲ್ಲ. ಇದೀಗ ಸಂಪೂರ್ಣ ಫಿಟ್ನೆಸ್ ಸಾಧಿಸಿರುವ ಪಾಂಡ್ಯ ಬರೋಡ ಪರ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಕಣಕ್ಕಿಳಿದಿದ್ದಾರೆ. ಈ ಮೂಲಕ ಆಯ್ಕೆ ಸಮಿತಿಗೆ ತಮ್ಮ ಫಿಟ್ನೆಸ್ ಸಾಬೀತುಪಡಿಸಿದ್ದಾರೆ.

ಅದರಂತೆ ಸೌತ್ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ಹಾರ್ದಿಕ್ ಪಾಂಡ್ಯ ಆಯ್ಕೆಯಾಗುವುದು ಖಚಿತವಾಗಿದೆ. ಇತ್ತ ಪಾಂಡ್ಯ ಅವರ ರಿ ಎಂಟ್ರಿಯಿಂದಾಗಿ ಯುವ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರು ತಂಡದಿಂದ ಹೊರಬೀಳುವ ಸಾಧ್ಯತೆಯಿದೆ.

ಇನ್ನು ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ಕುತ್ತಿಗೆ ನೋವಿಗೆ ಒಳಗಾಗಿದ್ದ ಭಾರತ ಟಿ20 ತಂಡದ ಉಪನಾಯಕ ಶುಭ್ಮನ್ ಗಿಲ್ ಮುಂಬರುವ ಸರಣಿಯಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆಯಿಲ್ಲ ಎಂದು ವರದಿಯಾಗಿದೆ. ಇದಾಗ್ಯೂ ಗಿಲ್ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್ನೆಸ್ ಕಸರತ್ತು ಶುರು ಮಾಡಿದ್ದಾರೆ.

ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಶುಭ್ಮನ್ ಗಿಲ್ ಅಲಭ್ಯರಾದರೆ ಯಶಸ್ವಿ ಜೈಸ್ವಾಲ್ಗೆ ಚಾನ್ಸ್ ಸಿಗುವ ಸಾಧ್ಯತೆಯಿದೆ. ಏಕೆಂದರೆ ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಗಿಲ್ ಹೊರಗುಳಿದ ಕಾರಣ ಜೈಸ್ವಾಲ್ ಆರಂಭಿಕನಾಗಿ ಕಣಕ್ಕಿಳಿಯುತ್ತಿದ್ದಾರೆ. ಹೀಗಾಗಿ ಅವರನ್ನೇ ಟಿ20 ಸರಣಿಗೂ ಬದಲಿ ಆಟಗಾರನಾಗಿ ಆಯ್ಕೆ ಮಾಡುವ ಸಾಧ್ಯತೆಯಿದೆ.