
ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಟೀಮ್ ಇಂಡಿಯಾ ಆಡಿರುವ ನಾಲ್ಕು ಪಂದ್ಯಗಳ ಪೈಕಿ ನಾಲ್ಕರಲ್ಲೂ ಜಯ ಸಾಧಿಸಿ ಭರ್ಜರಿ ಫಾರ್ಮ್ನಲ್ಲಿದೆ. ಮುಂದಿನ ಪಂದ್ಯವನ್ನು ರೋಹಿತ್ ಪಡೆ ಬಲಿಷ್ಠ ನ್ಯೂಝಿಲೆಂಡ್ ವಿರುದ್ಧ ಆಡಲಿದ್ದು, ಅಕ್ಟೋಬರ್ 22 ರಂದು ಆಯೋಜಿಸಲಾಗಿದೆ. ಆದರೆ, ಇದಕ್ಕೂ ಮುನ್ನ ಭಾರತಕ್ಕೆ ದೊಡ್ಡ ಹೊಡೆತ ಬಿದ್ದಿದೆ.

ಭಾನುವಾರದಂದು ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೀಸಿಯೇಷನ್ ಸ್ಟೇಡಿಯಂ ನಡೆಯಲಿರುವ ನ್ಯೂಝಿಲೆಂಡ್ ವಿರುದ್ಧದ ಪಂದ್ಯದಿಂದ ಭಾರತದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹೊರಬಿದ್ದಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದ ವೇಳೆ ಪಾಂಡ್ಯ ಅವರ ಎಡ ಹಿಮ್ಮಡಿಗೆ ಗಾಯವಾಗಿತ್ತು.

ಬಾಂಗ್ಲಾದೇಶ ಬ್ಯಾಟಿಂಗ್ ಇನ್ನಿಂಗ್ಸ್ನ 9ನೇ ಓವರ್ ಬೌಲ್ ಮಾಡಲು ಹಾರ್ದಿಕ್ ಪಾಂಡ್ಯ ಬಂದರು. ಓವರ್ನ ಮೂರನೇ ಎಸೆತವನ್ನು ಎದುರಿಸಿದ ಲಿಟನ್ ದಾಸ್ ಸ್ಟ್ರೇಟ್ ಹಿಟ್ ಮಾಡಿದರು. ಇದೇ ವೇಳೆ ಹಾರ್ದಿಕ್ ಪಾಂಡ್ಯ ತಮ್ಮ ಬಲಗಾಲಿನಿಂದ ಚೆಂಡನ್ನು ತಡೆಯಲು ಯತ್ನಿಸಿದರು. ಆದರೆ, ಆ ಪ್ರಕ್ರಿಯೆಯಲ್ಲಿ ಜಾರಿಬಿದ್ದು, ಗಾಯ ಮಾಡಿಕೊಂಡಿದ್ದಾರೆ.

ಕೂಡಲೇ ಮೈದಾನಕ್ಕೆ ಆಗಮಿಸಿದ ತಂಡದ ಪಿಸಿಯೋ, ಪಾಂಡ್ಯಗೆ ಪ್ರಾಥಮಿಕ ಚಿಕಿತ್ಸೆ ನೀಡಿದರು. ಬಹಳ ಹೊತ್ತು ಮೈದಾನದಲ್ಲಿಯೇ ಮಲಗಿ ನರಳುತ್ತಿದ್ದ ಪಾಂಡ್ಯ ಆ ಬಳಿಕ ಎದ್ದು ಮತ್ತೆ ಬೌಲ್ ಮಾಡಲು ಪ್ರಯತ್ನಿಸಿದರೂ ಕುಂಟುತ್ತಾ ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರನ್ನು ಪಿಸಿಯೋ ಮೈದಾನದಿಂದ ಹೊರಕೆ ಕರೆದೊಯ್ದರು.

ಇದೀಗ ಹಾರ್ದಿಕ್ ಧರ್ಮಶಾಲಾಗೆ ಪ್ರಯಾಣಿಸುವುದಿಲ್ಲ ಮತ್ತು ವೈದ್ಯಕೀಯ ಸಹಾಯಕ್ಕಾಗಿ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ತೆರಳುತ್ತಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ನ್ಯೂಝಿಲೆಂಡ್ ವಿರುದ್ಧದ ಪಂದ್ಯಕ್ಕೆ ಪಾಂಡ್ಯ ಅಲಭ್ಯರಾಗಿರುವುದು ಭಾರತಕ್ಕೆ ದೊಡ್ಡ ಹಿನ್ನಡೆ ಆಗಿದೆ.

"ಹಾರ್ದಿಕ್ ಅವರು ಬೆಂಗಳೂರಿಗೆ ಪ್ರಯಾಣಿಸುತ್ತಾರೆ. ಅಲ್ಲಿ ಅವರನ್ನು ಎನ್‌ಸಿಎಗೆ ವರದಿ ಮಾಡಲು ಕೇಳಲಾಗಿದೆ. ವೈದ್ಯಕೀಯ ತಂಡವು ಅವರ ಪಾದದ ಸ್ಕ್ಯಾನ್ ವರದಿಯನ್ನು ಮೌಲ್ಯಮಾಪನ ಮಾಡಿ ಚುಚ್ಚುಮದ್ದನ್ನು ನೀಡಿದ್ದಾರೆ. ಬಿಸಿಸಿಐ ಇಂಗ್ಲೆಂಡ್‌ನಲ್ಲಿರುವ ತಜ್ಞ ವೈದ್ಯರನ್ನು ಕೂಡ ಸಂಪರ್ಕಿಸಿದೆ ಮತ್ತು ಅವರೂ ಇದೇ ಅಭಿಪ್ರಾಯವನ್ನು ತಿಳಿಸಿದ್ದಾರೆ. ಹೀಗಾಗಿ ಪಾಂಡ್ಯ ಮುಂದಿನ ಪಂದ್ಯದಿಂದ ಹೊರಗುಳಿಯಲಿದ್ದಾರೆ,'' ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಬಳಿಕ ಅಫ್ಘಾನಿಸ್ತಾನ, ಪಾಕಿಸ್ತಾನ, ಗುರುವಾರ ಬಾಂಗ್ಲಾದೇಶ ವಿರುದ್ಧ ಜಯ ಸಾಧಿಸುವ ಮೂಲಕ ಅಮೋಘ ಫಾರ್ಮ್ನಲ್ಲಿದೆ. ಇತ್ತ ನ್ಯೂಝಿಲೆಂಡ್ ಕೂಡ ಆಡಿದ ನಾಲ್ಕು ಪಂದ್ಯಗಳಲ್ಲಿ ನಾಲ್ಕರಲ್ಲೂ ಗೆದ್ದು ಬಲಿಷ್ಠವಾಗಿದೆ. ಹೀಗಾಗಿ ಭಾನುವಾರ ನಡೆಯಲಿರುವ ಇಂಡೋ-ಕಿವೀಸ್ ಪಂದ್ಯ ಸಾಕಷ್ಟು ರೋಚಕತೆ ಸೃಷ್ಟಿಸಿದೆ.