
ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಬ್ರೂಕ್ (Harry Brook) ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಮೌಂಟ್ ಮೌಂಗನುಯಿನ ಬೇ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 33 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಇಂಗ್ಲೆಂಡ್ ತಂಡಕ್ಕೆ ಹ್ಯಾರಿ ಬ್ರೂಕ್ ಆಸರೆಯಾಗಿ ನಿಂತರು. ಅದು ಕೂಡ ಸಿಡಿಲಬ್ಬರದ ಬ್ಯಾಟಿಂಗ್ನೊಂದಿಗೆ ವಿಶೇಷ.

ಒಂದೆಡೆ ವಿಕೆಟ್ ಪತನಗೊಳ್ಳುತ್ತಿದ್ದರೆ, ಮತ್ತೊಂದೆಡೆ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿ ಹ್ಯಾರಿ ಬ್ರೂಕ್ ನ್ಯೂಝಿಲೆಂಡ್ ಬೌಲರ್ಗಳ ಬೆಂಡೆತ್ತಿದರು. ಪರಿಣಾಮ ಬ್ರೂಕ್ ಬ್ಯಾಟ್ನಿಂದ ಕೇವಲ 82 ಎಸೆತಗಳಲ್ಲಿ ಶತಕ ಮೂಡಿಬಂತು. ಈ ಶತಕದ ಬಳಿಕ ಕೂಡ ಆರ್ಭಟ ಮುಂದುವರೆಸಿದ ಬ್ರೂಕ್ ಇಂಗ್ಲೆಂಡ್ ತಂಡದ ಸ್ಕೋರ್ ಅನ್ನು 200ರ ಗಡಿದಾಟಿಸಿದರು.

ಕೊನೆಯ ವಿಕೆಟ್ವರೆಗೆ ಬ್ಯಾಟ್ ಬೀಸಿದ ಹ್ಯಾರಿ ಬ್ರೂಕ್ 101 ಎಸೆತಗಳಲ್ಲಿ 11 ಭರ್ಜರಿ ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ 135 ರನ್ ಬಾರಿಸಿದರು. ಈ ಭರ್ಜರಿ ಶತಕದ ನೆರವಿನೊಂದಿಗೆ ಇಂಗ್ಲೆಂಡ್ ತಂಡವು 35.2 ಓವರ್ಗಳಲ್ಲಿ 223 ರನ್ಗಳಿಸಿ ಆಲೌಟ್ ಆಯಿತು. ಇನ್ನು ಈ ಭರ್ಜರಿ ಶತಕದೊಂದಿಗೆ ಬ್ರೂಕ್ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡರು.

ಅಂದರೆ ಈ ಪಂದ್ಯದಲ್ಲಿ ಇಂಗ್ಲೆಂಡ್ ಕಲೆಹಾಕಿದ್ದು 223 ರನ್ಗಳು. ಇದರಲ್ಲಿ ಹ್ಯಾರಿ ಬ್ರೂಕ್ ಬ್ಯಾಟ್ನಿಂದ ಮೂಡಿಬಂದ ಸ್ಕೋರ್ 135 ರನ್ಗಳು. ಈ ಮೂಲಕ ಇಂಗ್ಲೆಂಡ್ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಒಟ್ಟು ಸ್ಕೋರ್ನ 60.53% ರನ್ಗಳಿಸಿದ ಮೊದಲ ನಾಯಕನೆಂಬ ದಾಖಲೆ ಬ್ರೂಕ್ ಪಾಲಾಯಿತು.

ಅಷ್ಟೇ ಅಲ್ಲದೆ ನ್ಯೂಝಿಲೆಂಡ್ ವಿರುದ್ಧ ಕಿವೀಸ್ ನಾಡಿನಲ್ಲಿ ಗರಿಷ್ಠ ಸ್ಕೋರ್ಗಳಿಸಿದ ಆಂಗ್ಲ ನಾಯಕನೆಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡರು. ಇದರ ಜೊತೆಗೆ ನ್ಯೂಝಿಲೆಂಡ್ ವಿರುದ್ಧ ಏಕದಿನ ಪಂದ್ಯವೊಂದರಲ್ಲಿ 11 ಸಿಕ್ಸ್ ಸಿಡಿಸಿದ ಇಂಗ್ಲೆಂಡ್ನ ಮೊದಲ ಕ್ಯಾಪ್ಟನ್ ಎಂಬ ದಾಖಲೆಯನ್ನು ಕೂಡ ನಿರ್ಮಿಸಿದ್ದಾರೆ. ಒಟ್ಟಿನಲ್ಲಿ ಭರ್ಜರಿ ಸೆಂಚುರಿ ಸಿಡಿಸುವ ಮೂಲಕ ಹ್ಯಾರಿ ಬ್ರೂಕ್ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.