
ಸಿಂಹಳೀಯರ ನಾಡಿಗೆ ಪ್ರವಾಸ ಬೆಳೆಸಿರುವ ಅಫ್ಘಾನಿಸ್ತಾನ ತಂಡ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಹಂಬನ್ತೊಟಾದ ಮಹಿಂದಾ ರಾಜಪಕ್ಸಾ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ 21 ವರ್ಷದ ಯುವ ಬ್ಯಾಟರ್ ಇಬ್ರಾಹಿಂ ಜದ್ರಾನ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಕ್ರಿಕೆಟ್ ಶಿಶುಗಳು 6 ವಿಕೆಟ್ಗಳ ಜಯ ಕಂಡರು.

ಇಡೀ ಪಂದ್ಯದ ಪ್ರಮುಖ ಹೈಲೇಟ್ ಇಬ್ರಾಹಿಂ ಜದ್ರಾನ್ ಆಗಿದ್ದರು. ಸ್ಫೋಟಕ ಬ್ಯಾಟಿಂಗ್ ನಡೆಸಿದ ಇವರು 98 ಎಸೆತಗಳಲ್ಲಿ 11 ಫೋರ್, 2 ಸಿಕ್ಸರ್ ಬಾರಿಸಿ 98 ರನ್ ಸಿಡಿಸಿದರು. ಈ ಮೂಲಕ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ಶುಭ್ಮನ್ ಗಿಲ್ ದಾಖಲೆಯನ್ನು ಕೂಡ ಅಳಿಸಿ ಹಾಕಿದ್ದಾರೆ.

ಶ್ರೀಲಂಕಾ ನೀಡಿದ್ದ 269 ರನ್ಗಳ ಸವಾಲಿನ ಟಾರ್ಗೆಟ್ ಬೆನ್ನಟ್ಟಿದ ಅಫ್ಘಾನ್ ಆರಂಭದಲ್ಲೇ ರೆಹ್ಮಾನುಲ್ಲ ಗುರ್ಬಜ್ (14) ವಿಕೆಟ್ ಕಳೆದುಕೊಂಡಿತು. ಆದರೆ, ತಂಡಕ್ಕೆ ಇದು ದೊಡ್ಡ ಹೊಡೆತ ಬೀಳಲಿಲ್ಲ. 2ನೇ ವಿಕೆಟ್ಗೆ ಜೊತೆಯಾದ ಇಬ್ರಾಹಿಂ ಜದ್ರಾನ್ ಹಾಗೂ ರೆಹ್ಮತ್ ಶಾ ಬೊಂಬಾಟ್ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಜೋಡಿ 146 ರನ್ಗಳ ಕಾಣಿಕೆ ನೀಡಿತು.

ಆರು ತಿಂಗಳ ಅಂತರದ ಬಳಿಕ ಏಕದಿನ ಸ್ವರೂಪಕ್ಕೆ ಮರಳಿದ ಜದ್ರಾನ್ 98 ರನ್ ಸಿಡಿಸಿದರೆ, ರೆಹ್ಮತ್ 55 ರನ್ ಬಾರಿಸಿರು. ನಂತರ ನಾಯಕ ಹಸ್ಮತುಲ್ಲ ಶಾಹಿದಿ 38 ರನ್, ಮೊಹಮ್ಮದ್ ನಬಿ 27 ರನ್ ಚಚ್ಚಿ ಗೆಲುವು ಶಾಟ್ ಹೊಡೆದರು. ಅಫ್ಘಾನ್ 46.5 ಓವರ್ನಲ್ಲಿ 4 ವಿಕೆಟ್ ನಷ್ಟಕ್ಕೆ 269 ರನ್ ಗಳಿಸಿ ಜಯ ಸಾಧಿಸಿತು.

98 ರನ್ ಕಲೆಹಾಕಿ ಪಂದ್ಯಶ್ರೇಷ್ಠ ಕೂಡ ಬಾಚಿಕೊಂಡ ಇಬ್ರಾಹಿಂ ಜದ್ರಾನ್ ಅವರು ಗಿಲ್ ದಾಖಲೆಯನ್ನು ಪುಡಿಗಟ್ಟಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ ಅತಿ ವೇಗವಾಗಿ 500 ರನ್ ಗಳಿಸಿದ ಎರಡನೇ ಬ್ಯಾಟರ್ ಎಂಬ ಸಾಧನೆಯನ್ನು ಇವರು ಮಾಡಿದ್ದಾರೆ.

ಜದ್ರಾನ್ 9 ಇನ್ನಿಂಗ್ಸ್ನಲ್ಲಿ ಈ ದಾಖಲೆ ಮಾಡಿದ್ದರೆ, ಮೊದಲ ಸ್ಥಾನದಲ್ಲಿ ದ. ಆಫ್ರಿಕಾದ ಜನ್ನೆಮನ್ ಮಲನ್ ಇದ್ದಾರೆ. ಇವರು 7 ಇನ್ನಿಂಗ್ಸ್ಗಳಲ್ಲಿ 500 ರನ್ ಕಲೆಹಾಕಿದ್ದಾರೆ. ಈ ಮೂಲಕ 10 ಇನ್ನಿಂಗ್ಸ್ಗಳಲ್ಲಿ 500 ರನ್ ಗಳಿಸಿದ್ದ ಶುಭ್ಮನ್ ಗಿಲ್ ದಾಖಲೆಯನ್ನು ಇಬ್ರಾಹಿಂ ಜದ್ರಾನ್ ಮುರಿದಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಉತ್ತಮ ಆರಂಭ ಪಡೆದುಕೊಳ್ಳಲಿಲ್ಲ. ತಂಡದ ಮೊತ್ತ 100ರ ಗಡಿದಾಟುವ ಮೊದಲೇ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಕರುಣಾರತ್ನೆ (4), ಕುಸಲ್ ಮೆಂಡಿಸ್ (11), ಮ್ಯಾಥ್ಯೂಸ್ (12) ವಿಕೆಟ್ ಕಳೆದುಕೊಂಡಿತು.

ನಂತರದಲ್ಲಿ ಬಂದ ಅಸಲಂಕ (91 ರನ್, 95 ಬಾಲ್, 12 ಬೌಂಡರಿ) ಜವಾಬ್ದಾರಿಯ ಆಟದಿಂದ ತಂಡಕ್ಕೆ ಆಸರೆಯಾದರು. ಇವರಿಗೆ ಧನಂಜಯ ಡಿಸಿಲ್ವಾ (51), ಪತುಮ್ ನಿಸ್ಸಂಕ (38) ಉತ್ತಮ ಸಾಥ್ ನೀಡಿದರು. ಕೆಳ ಕ್ರಮಾಂಕದಲ್ಲಿ ಬಂದ ಬ್ಯಾಟರ್‌ಗಳು ಅಲ್ಪಮೊತ್ತದ ಕಾಣಿಕೆ ನೀಡಿದ ಪರಿಣಾಮ ನಿಗದಿತ ಶ್ರೀಲಂಕಾ 50 ಓವರ್‌ಗಳಲ್ಲಿ 268 ರನ್‌ಗಳಿಸಿತು.