
ICC Men's ODI Player of the Year: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ 2022ರ ಏಕದಿನ ಕ್ರಿಕೆಟಿಗ ಪ್ರಶಸ್ತಿಯನ್ನು ಪ್ರಕಟಿಸಿದೆ. ಈ ಬಾರಿ ಕೂಡ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಜಂ ಅತ್ಯುತ್ತಮ ಏಕದಿನ ಆಟಗಾರನಾಗಿ ಹೊರಹೊಮ್ಮಿದ್ದಾರೆ. 2021 ರಲ್ಲೂ ಈ ಪ್ರಶಸ್ತಿ ಪಾಕ್ ಆಟಗಾರನಿಗೆ ಒಲಿದಿತ್ತು ಎಂಬುದು ವಿಶೇಷ.

ಈ ಬಾರಿ ನಾಮನಿರ್ದೇಶಿತ ಪಟ್ಟಿಯಲ್ಲಿ ಒಟ್ಟು ನಾಲ್ವರು ಆಟಗಾರರು ಸ್ಥಾನ ಪಡೆದಿದ್ದರು. ಆದರೆ ಭಾರತದ ಯಾವುದೇ ಆಟಗಾರ ಈ ಬಾರಿಯ ಏಕದಿನ ಪ್ರಶಸ್ತಿಗೆ ಆಯ್ಕೆಯಾಗಿರಲಿಲ್ಲ.

ಅದರಂತೆ ಐಸಿಸಿ 2022 ರ ಏಕದಿನ ಆಟಗಾರ ಪ್ರಶಸ್ತಿ ಸುತ್ತಿನಲ್ಲಿ ಪಾಕ್ ತಂಡದ ನಾಯಕ ಬಾಬರ್ ಆಜಂ, ಆಸ್ಟ್ರೇಲಿಯಾದ ಸ್ಪಿನ್ನರ್ ಆ್ಯಡಂ ಝಂಪಾ, ಜಿಂಬಾಬ್ವೆ ಆಲ್ರೌಂಡರ್ ಸಿಕಂದರ್ ರಾಝ ಹಾಗೂ ವೆಸ್ಟ್ ಇಂಡೀಸ್ ಬ್ಯಾಟ್ಸ್ಮನ್ ಶಾಯ್ ಹೋಪ್ ಕಾಣಿಸಿಕೊಂಡಿದ್ದರು. ಆದರೆ ಇವರೆಲ್ಲರನ್ನು ಹಿಂದಿಕ್ಕಿ ಮತ್ತೊಮ್ಮೆ ಐಸಿಸಿ ಏಕದಿನ ಕ್ರಿಕೆಟಿಗ ಪ್ರಶಸ್ತಿ ಪಡೆಯುವಲ್ಲಿ ಬಾಬರ್ ಆಜಂ ಯಶಸ್ವಿಯಾಗಿದ್ದಾರೆ.

2022 ರಲ್ಲಿ 9 ಏಕದಿನ ಪಂದ್ಯಗಳನ್ನು ಆಡಿದ್ದ ಬಾಬರ್ ಆಜಂ ಮೂರು ಭರ್ಜರಿ ಶತಕ ಹಾಗೂ 5 ಅರ್ಧಶತಕಗಳನ್ನು ಬಾರಿಸಿದ್ದರು. ಈ ಮೂಲಕ 84.87 ಸರಾಸರಿಯಂತೆ ಒಟ್ಟು 679 ರನ್ ಕಲೆಹಾಕಿದ್ದರು. ಈ ಅದ್ಭುತ ಪ್ರದರ್ಶನದ ಫಲವಾಗಿ ಬಾಬರ್ ಆಜಂ ಕಳೆದ ವರ್ಷದ ಅತ್ಯುತ್ತಮ ಏಕದಿನ ಆಟಗಾರನಾಗಿ ಹೊರಹೊಮ್ಮಿದ್ದಾರೆ.

ಇನ್ನು ಕಳೆದ ವರ್ಷದ ಐಸಿಸಿ ಟಿ20 ಆಟಗಾರ ಪ್ರಶಸ್ತಿ ಟೀಮ್ ಇಂಡಿಯಾದ ಸೂರ್ಯಕುಮಾರ್ ಯಾದವ್ಗೆ ಒಲಿದಿದೆ. 2022 ರಲ್ಲಿ 31 ಟಿ20 ಇನಿಂಗ್ಸ್ ಆಡಿದ್ದ ಸೂರ್ಯ 187.43 ಸ್ಟ್ರೈಕ್ ರೇಟ್‌ನಲ್ಲಿ 1164 ರನ್ ಗಳಿಸಿದ್ದರು. ಈ ವೇಳೆ 2 ಶತಕ ಹಾಗೂ 9 ಅರ್ಧಶತಕಗಳನ್ನು ಬಾರಿಸಿದ್ದರು. ಅಷ್ಟೇ ಅಲ್ಲದೆ 68 ಸಿಕ್ಸ್ ಸಿಡಿಸುವ ಮೂಲಕ ಹೊಸ ದಾಖಲೆ ಬರೆದಿದ್ದರು.