ಅಂತಾರಾಷ್ಟ್ರೀಯ ಟಿ20 ಬ್ಯಾಟರ್ಗಳ ಶ್ರೇಯಾಂಕವನ್ನು ಐಸಿಸಿ ಇಂದು ಬಿಡುಗಡೆ ಮಾಡಿದೆ. ಅದರಂತೆ ಭಾರತದ ಸೂರ್ಯಕುಮಾರ್ ಯಾದವ್ ನಂಬರ್ ಒನ್ ಸ್ಥಾನದಲ್ಲಿ ಮುಂದುವರಿದರೆ, ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಎರಡನೇ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಏತನ್ಮಧ್ಯೆ, ಭಾರತ ತಂಡದ 3 ಬ್ಯಾಟ್ಸ್‌ಮನ್‌ಗಳು ಅಗ್ರ 10ರೊಳಗೆ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಐಸಿಸಿ ಬಿಡುಗಡೆ ಮಾಡಿರುವ ನೂತನ ಟಿ20 ಶ್ರೇಯಾಂಕದಲ್ಲಿ ಭಾರತದ ಸೂರ್ಯಕುಮಾರ್ ಯಾದವ್ 869 ರೇಟಿಂಗ್‌ನೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಅವರು ಪ್ರಸ್ತುತ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡುತ್ತಿಲ್ಲ, ಆದರೂ ಅವರ ನಂಬರ್ ಒನ್ ಸ್ಥಾನಕ್ಕೆ ಯಾವುದೇ ಭಂಗ ಬಂದಿಲ್ಲ.
802 ರೇಟಿಂಗ್‌ನೊಂದಿಗೆ ಇಂಗ್ಲೆಂಡಿನ ಫಿಲ್ ಸಾಲ್ಟ್ ಎರಡನೇ ಸ್ಥಾನದಲ್ಲಿದ್ದರೆ, ಒಂದು ಕಾಲದಲ್ಲಿ ರಿಜ್ವಾನ್ ನಂಬರ್ ಒನ್ ಸ್ಥಾನವನ್ನು ಅಲಂಕರಿಸಿದ್ದ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ 775 ರೇಟಿಂಗ್‌ನೊಂದಿಗೆ ಮೂರನೇ ಸ್ಥಾನ ಸ್ಥಾನಕ್ಕೆ ಜಾರಿದ್ದಾರೆ.
ಏತನ್ಮಧ್ಯೆ, ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಆಝಂ ಒಂದು ಸ್ಥಾನ ಜಿಗಿತದೊಂದಿಗೆ ನಾಲ್ಕನೇ ಸ್ಥಾನವನ್ನು ತಲುಪಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ಅವರು ಬ್ಯಾಕ್ ಟು ಬ್ಯಾಕ್ ಅರ್ಧಶತಕಗಳನ್ನು ಸಿಡಿಸಿದ್ದು 763 ರೇಟಿಂಗ್‌ನೊಂದಿಗೆ ನಾಲ್ಕನೇ ಸ್ಥಾನ ಪಡೆದಿದ್ದಾರೆ.
ಹಾಗೆಯೇ ಒಂದು ಸ್ಥಾನ ಕಳೆದುಕೊಂಡಿರುವ ದಕ್ಷಿಣ ಆಫ್ರಿಕಾದ ಏಡೆನ್ ಮಾರ್ಕ್ರಾಮ್ 755 ರೇಟಿಂಗ್‌ನೊಂದಿಗೆ ಐದನೇ ಸ್ಥಾನ ಪಡೆದುಕೊಂಡಿದ್ದಾರೆ.
ಏತನ್ಮಧ್ಯೆ, ಭಾರತದ ಯುವ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಅಫ್ಘಾನಿಸ್ತಾನ ವಿರುದ್ಧದ ಎರಡನೇ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ದು, ಸತತ ಏಳು ಸ್ಥಾನ ಜಿಗಿತ ಕಂಡಿದ್ದಾರೆ. ಇದೀಗ ಜೈಸ್ವಾಲ್ 739 ರೇಟಿಂಗ್‌ನೊಂದಿಗೆ ಆರನೇ ಸ್ಥಾನಕ್ಕೆ ತಲುಪಿದ್ದಾರೆ.
ಯಶಸ್ವಿ ಜೈಸ್ವಾಲ್ ಮುಂದೆ ಬರುವುದರಿಂದ ಅನೇಕ ಬ್ಯಾಟ್ಸ್‌ಮನ್‌ಗಳ ಸ್ಥಾನ ಪಲ್ಲಟವಾಗಿದೆ. ಅದರಂತೆ ದಕ್ಷಿಣ ಆಫ್ರಿಕಾದ ರಿಲೆ ರೂಸೋ 689 ರೇಟಿಂಗ್‌ನೊಂದಿಗೆ ಒಂದು ಸ್ಥಾನ ಕುಸಿದು ಏಳನೇ ಸ್ಥಾನಕ್ಕೆ ತಲುಪಿದ್ದಾರೆ. ಇಂಗ್ಲೆಂಡ್‌ನ ಜೋಸ್ ಬಟ್ಲರ್ ಕೂಡ ಒಂದು ಸ್ಥಾನ ಕಳೆದುಕೊಂಡಿದ್ದು, 680 ರೇಟಿಂಗ್‌ನೊಂದಿಗೆ ಎಂಟನೇ ಸ್ಥಾನದಲ್ಲಿದ್ದಾರೆ.
ಭಾರತದ ರುತುರಾಜ್ ಗಾಯಕ್ವಾಡ್ ಕೂಡ ಒಂದು ಸ್ಥಾನವನ್ನು ಕಳೆದುಕೊಂಡಿದ್ದು, 661 ರೇಟಿಂಗ್‌ನೊಂದಿಗೆ ಎಂಟರಿಂದ ಒಂಬತ್ತನೇ ಸ್ಥಾನಕ್ಕೆ ಕುಸಿದಿದ್ದಾರೆ. ದಕ್ಷಿಣ ಆಫ್ರಿಕಾದ ರೀಜಾ ಹೆಂಡ್ರಿಕ್ಸ್ 660 ರೇಟಿಂಗ್‌ನೊಂದಿಗೆ ಹತ್ತನೇ ಸ್ಥಾನದಲ್ಲಿದ್ದಾರೆ. ಅಂದರೆ ಭಾರತದ ಒಟ್ಟು ಮೂವರು ಬ್ಯಾಟ್ಸ್‌ಮನ್‌ಗಳು ಈ ಶ್ರೇಯಾಂಕದಲ್ಲಿ ಅಗ್ರ 10 ರೊಳಗೆ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.