- Kannada News Photo gallery Cricket photos IND vs AFG axar patel, mohammad nabi, najibullah zadran, can creat record in bengaluru
IND vs AFG: ಬೆಂಗಳೂರಿನಲ್ಲಿ ದಾಖಲೆ ಬರೆಯುವ ಹೊಸ್ತಿಲಿನಲ್ಲಿ ಈ ಮೂವರು ಆಟಗಾರರು
IND vs AFG: ಈ ಸರಣಿ ಜೂನ್‌ನಲ್ಲಿ ನಡೆಯಲಿರುವ 2024 ರ ಟಿ20 ವಿಶ್ವಕಪ್‌ಗೆ ಮೊದಲು ಭಾರತ ತಂಡದ ಕೊನೆಯ ಟಿ20 ಅಂತರರಾಷ್ಟ್ರೀಯ ಸರಣಿಯಾಗಿದೆ. ಹೀಗಾಗಿ ಸರಣಿ ಗೆದ್ದಿರುವ ಭಾರತ ತಂಡ ಮೂರನೇ ಪಂದ್ಯಕ್ಕಾಗಿ ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡುವ ಸಾಧ್ಯತೆಗಳಿವೆ. ಈ ನಡುವೆ ಇಂದಿನ ಪಂದ್ಯದಲ್ಲಿ ಮೂವರು ಆಟಗಾರರು ದಾಖಲೆ ಸೃಷ್ಟಿಸುವ ಅವಕಾಶ ಹೊಂದಿದ್ದಾರೆ.
Updated on:Jan 17, 2024 | 4:10 PM

ಇಂದು ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಟಿ20 ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಇದಕ್ಕಾಗಿ ಉಭಯ ತಂಡಗಳು ತಮ್ಮ ತಮ್ಮ ತಯಾರಿಯಲ್ಲಿ ನಿರತರಾಗಿವೆ. ಭಾರತ ತಂಡ ಈಗಾಗಲೇ ಸರಣಿಯನ್ನು ವಶಪಡಿಸಿಕೊಂಡಿದ್ದರೂ, ಮೂರನೇ ಪಂದ್ಯವನ್ನು ಗೆಲ್ಲುವ ಮೂಲಕ ಕ್ಲೀನ್ ಸ್ವೀಪ್ ಇರಾದೆಯಲ್ಲಿದೆ.

ಅಲ್ಲದೆ ಈ ಸರಣಿ ಜೂನ್‌ನಲ್ಲಿ ನಡೆಯಲಿರುವ 2024 ರ ಟಿ20 ವಿಶ್ವಕಪ್‌ಗೆ ಮೊದಲು ಭಾರತ ತಂಡದ ಕೊನೆಯ ಟಿ20 ಅಂತರರಾಷ್ಟ್ರೀಯ ಸರಣಿಯಾಗಿದೆ. ಹೀಗಾಗಿ ಸರಣಿ ಗೆದ್ದಿರುವ ಭಾರತ ತಂಡ ಮೂರನೇ ಪಂದ್ಯಕ್ಕಾಗಿ ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡುವ ಸಾಧ್ಯತೆಗಳಿವೆ. ಈ ನಡುವೆ ಇಂದಿನ ಪಂದ್ಯದಲ್ಲಿ ಮೂವರು ಆಟಗಾರರು ದಾಖಲೆ ಸೃಷ್ಟಿಸುವ ಅವಕಾಶ ಹೊಂದಿದ್ದಾರೆ.

ಭಾರತದ ಸ್ಟಾರ್ ಸ್ಪಿನ್ನರ್ ಅಕ್ಷರ್ ಪಟೇಲ್ ಇದುವರೆಗೆ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ ಪರ 49 ವಿಕೆಟ್ ಪಡೆದಿದ್ದಾರೆ. 50 ವಿಕೆಟ್ ಪೂರೈಸಲು ಅವರಿಗೆ ಕೇವಲ ಒಂದು ವಿಕೆಟ್ ಅಗತ್ಯವಿದೆ. ಅವರು ಇನ್ನೂ ಒಂದು ವಿಕೆಟ್ ಪಡೆದರೆ, ಈ ಸ್ವರೂಪದಲ್ಲಿ 50 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಭಾರತದ ಒಂಬತ್ತನೇ ಬೌಲರ್ ಎನಿಸಿಕೊಳ್ಳಲಿದ್ದಾರೆ.

ಅಂದಹಾಗೆ, ಈ ಮಾದರಿಯಲ್ಲಿ ಭಾರತ ಪರ ಅತಿ ಹೆಚ್ಚು ವಿಕೆಟ್ ಪಡೆದವರ ಬಗ್ಗೆ ಮಾತನಾಡುವುದಾದರೆ, ಈ ದಾಖಲೆ ಯುಜ್ವೇಂದ್ರ ಚಹಾಲ್ ಹೆಸರಿನಲ್ಲಿದೆ. ಅವರು ಇಲ್ಲಿಯವರೆಗೆ ಈ ಚುಟುಕು ಮಾದರಿಯಲ್ಲಿ 96 ವಿಕೆಟ್ ಉರುಳಿಸಿದ್ದಾರೆ.

ಅಫ್ಘಾನಿಸ್ತಾನ ತಂಡದ ಮಾಜಿ ನಾಯಕ ಮೊಹಮ್ಮದ್ ನಬಿ ಅಂತರಾಷ್ಟ್ರೀಯ ಟಿ20ಯಲ್ಲಿ 2000 ರನ್ ಪೂರೈಸಲು 67 ರನ್ಗಳ ಅಂತರದಲ್ಲಿದ್ದಾರೆ. ನಬಿ ಪ್ರಸ್ತುತ 1933 ರನ್ ಕಲೆಹಾಕಿದ್ದು, ಈ ಪಂದ್ಯದಲ್ಲಿ 2000 ಸಾವಿರ ರನ್ ಪೂರೈಸಿದರೆ, ಈ ದಾಖಲೆ ಮಾಡಿದ ಅಫ್ಘಾನಿಸ್ತಾನದ ಎರಡನೇ ಬ್ಯಾಟ್ಸ್‌ಮನ್ ಆಗಲಿದ್ದಾರೆ.

ಇವರಿಗೂ ಮೊದಲು, ಮೊಹಮ್ಮದ್ ಶಹಜಾದ್ ಮಾತ್ರ ಅಫ್ಘಾನಿಸ್ತಾನ ಪರ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 2000 ರನ್ ಗಳಿಸಿದ್ದಾರೆ. ಅವರ ಖಾತೆಯಲ್ಲಿ 2048 ಟಿ20 ರನ್ಗಳಿವೆ ಆದರೆ, ಭಾರತದ ದಾಳಿಯ ವಿರುದ್ಧ ಮೊಹಮ್ಮದ್ ನಬಿಗೆ 67 ರನ್ ಗಳಿಸುವುದು ಸುಲಭವಲ್ಲ.

ಅಲ್ಲದೆ ಈ ಪಂದ್ಯದಲ್ಲಿ ಮೊಹಮ್ಮದ್ ನಬಿ ಸಿಕ್ಸರ್ಗಳ ಶತಕ ಸಿಡಿಸಲು ಇನ್ನು 2 ಸಿಕ್ಸರ್ಗಳ ದೂರದಲ್ಲಿದ್ದಾರೆ. ನಬಿ ಪ್ರಸ್ತುತ 98 ಸಿಕ್ಸರ್ಗಳನ್ನು ಹೊಡೆದಿದ್ದಾರೆ. ಇವರೊಂದಿಗೆ ಮತ್ತೊಬ್ಬ ಆಟಗಾರ ನಜಿಬುಲ್ಲಾ ಜದ್ರಾನ್ ಕೂಡ 95 ಸಿಕ್ಸರ್‌ಗಳನ್ನು ಸಿಡಿಸಿದ್ದು, ಈ ಪಂದ್ಯದಲ್ಲಿ 5 ಸಿಕ್ಸರ್ಗಳನ್ನು ಸಿಡಿಸಿದರೆ ಅವರೂ 100 ಸಿಕ್ಸರ್‌ಗಳನ್ನು ಪೂರೈಸಲಿದ್ದಾರೆ.
Published On - 4:10 pm, Wed, 17 January 24




