
ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು 1-2 ಅಂತರದಿಂದ ಕಳೆದುಕೊಂಡಿದೆ. ತಂಡದ ಸರಣಿ ಸೋಲಿಗೆ ಪ್ರಮುಖ ಆಟಗಾರರ ಕಳಪೆ ಪ್ರದರ್ಶನವೇ ಕಾರಣವಾಗಿತ್ತು. ಆದಾಗ್ಯೂ ಈ ಸರಣಿಯಲ್ಲಿ ಕಿಂಗ್ ಕೊಹ್ಲಿಯ ಪ್ರದರ್ಶನ ಅಮೋಘವಾಗಿತ್ತು. ಹೀಗಾಗಿ ಸರಣಿಯ ನಡುವೆ ಅವರಿಗೆ ಐಸಿಸಿ ಕಡೆಯಿಂದ ನಂಬರ್ 1 ಸ್ಥಾನದ ಬಹುಮಾನವೂ ಸಿಕ್ಕಿತ್ತು.

ವಾಸ್ತವವಾಗಿ ಕಳೆದ ವಾರದ ಐಸಿಸಿ ಏಕದಿನ ಬ್ಯಾಟ್ಸ್‌ಮನ್‌ಗಳ ರ್ಯಾಂಕಿಂಗ್ನಲ್ಲಿ ವಿರಾಟ್ ಕೊಹ್ಲಿ ವರ್ಷಗಳ ಬಳಿಕ ಅಗ್ರಸ್ಥಾನಕ್ಕೇರಿದ್ದರು. ಆದರೆ ಈ ವಾರದ ರ್ಯಾಂಕಿಂಗ್ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಗೆ ಆಘಾತ ಎದುರಾಗಿದೆ. ಸರಣಿಯಲ್ಲಿ ಕೊಹ್ಲಿ ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಕೊಹ್ಲಿ ಇದೀಗ ನಂಬರ್ 1 ಸ್ಥಾನವನ್ನು ಕಳೆದುಕೊಂಡಿದ್ದು, ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.

ಕಿಂಗ್ ಕೊಹ್ಲಿಯನ್ನು ಅಗ್ರಸ್ಥಾನದಿಂದ ಕೆಳಗಿಳಿಸಿರುವ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಡ್ಯಾರಿಲ್ ಮಿಚೆಲ್ ನಂಬರ್ 1 ಸ್ಥಾನಕ್ಕೇರಿದ್ದಾರೆ. ವಾಸ್ತವವಾಗಿ ಟೀಂ ಇಂಡಿಯಾ ಈ ಏಕದಿನ ಸರಣಿ ಸೋಲಿಗೆ ಪ್ರಮುಖ ಕಾರಣವಾಗಿದ್ದೆ ಮಿಚೆಲ್. ಈ ಸರಣಿಯಲ್ಲಿ ಸತತ ಮಿಚೆಲ್ 2 ಶತಕ ಸೇರಿದಂತೆ ಒಟ್ಟು 352 ರನ್ ಬಾರಿಸಿದ್ದರು. ಅದರ ಪರಿಣಾಮವಾಗಿ ಮಿಚೆಲ್ಗೆ ಅಗ್ರಸ್ಥಾನ ಒಲಿದಿದೆ.

ಐಸಿಸಿ ಬಿಡುಗಡೆ ಮಾಡಿರುವ ಇತ್ತೀಚಿನ ಶ್ರೇಯಾಂಕದಲ್ಲಿ, ನ್ಯೂಜಿಲೆಂಡ್‌ನ ಡ್ಯಾರಿಲ್ ಮಿಚೆಲ್ 845 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಹೊಸ ನಂಬರ್ ಒನ್ ಏಕದಿನ ಬ್ಯಾಟ್ಸ್‌ಮನ್ ಆಗಿದ್ದಾರೆ. ಅವರ ರೇಟಿಂಗ್ 51 ಪಾಯಿಂಟ್‌ಗಳಷ್ಟು ಹೆಚ್ಚಾಗಿದೆ. ಹಿಂದಿನ ಶ್ರೇಯಾಂಕದಲ್ಲಿ, ಅವರು 794 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಬ್ಯಾಟ್ಸ್‌ಮನ್‌ಗಳ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಎರಡನೇ ಸ್ಥಾನದಲ್ಲಿದ್ದರು.

ವಿರಾಟ್ ಕೊಹ್ಲಿ ಬಗ್ಗೆ ಹೇಳುವುದಾದರೆ, ಅವರು ಹಿಂದಿನ ಶ್ರೇಯಾಂಕದಲ್ಲಿ 795 ರೇಟಿಂಗ್ ಅಂಕಗಳೊಂದಿಗೆ ನಂಬರ್ ಒನ್ ಏಕದಿನ ಬ್ಯಾಟ್ಸ್‌ಮನ್ ಆಗಿದ್ದರು. ಇತ್ತೀಚಿನ ಶ್ರೇಯಾಂಕದಲ್ಲಿ ಕೊಹ್ಲಿ ಇನ್ನೂ 795 ರೇಟಿಂಗ್ ಅಂಕಗಳನ್ನು ಹೊಂದಿದ್ದು, ಎರಡನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕಳೆದ ವಾರವಷ್ಟೇ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿ ನಂಬರ್ ಒನ್ ಸ್ಥಾನ ಪಡೆದಿದ್ದರು. ಆದಾಗ್ಯೂ, ಡ್ಯಾರಿಲ್ ಮಿಚೆಲ್ ಒಂದು ವಾರದೊಳಗೆ ಅವರ ಸ್ಥಾನವನ್ನು ಕಸಿದುಕೊಂಡಿದ್ದಾರೆ.

ಐಸಿಸಿ ಏಕದಿನ ಶ್ರೇಯಾಂಕದಲ್ಲಿ ವಿರಾಟ್ ಕೊಹ್ಲಿ ನಂಬರ್ 1 ಸ್ಥಾನವನ್ನು ಕಳೆದುಕೊಂಡಿರುವುದು ಅವರ ಅಭಿಮಾನಿಗಳಿಗೆ ನೋವುಂಟು ಮಾಡಿರುವುದಂತೂ ಖಚಿತ. ಆದರೆ ಮುಖ್ಯವಾದ ವಿಷಯವೆಂದರೆ ಹೊಸ ಶ್ರೇಯಾಂಕದಲ್ಲಿ ಅಗ್ರ ಐದು ಬ್ಯಾಟ್ಸ್‌ಮನ್‌ಗಳಲ್ಲಿ ಮೂವರು ಭಾರತೀಯರು ಸೇರಿದ್ದಾರೆ. ವಿರಾಟ್ ಕೊಹ್ಲಿ ಪ್ರಸ್ತುತ 2 ನೇ ಸ್ಥಾನದಲ್ಲಿದ್ದರೆ, ರೋಹಿತ್ ಶರ್ಮಾ 4 ನೇ ಸ್ಥಾನ ಮತ್ತು ಶುಭ್‌ಮನ್ ಗಿಲ್ 5 ನೇ ಸ್ಥಾನದಲ್ಲಿದ್ದಾರೆ.

ವಿರಾಟ್, ರೋಹಿತ್ ಮತ್ತು ಗಿಲ್ ಮೊದಲ ಐದು ಸ್ಥಾನಗಳಲ್ಲಿ ಉಳಿದಿದ್ದರೆ, ಕೆಎಲ್ ರಾಹುಲ್ ಕೂಡ ಒಂದು ಸ್ಥಾನ ಜಿಗಿದು ಟಾಪ್ 10 ರೊಳಗೆ ಪ್ರವೇಶಿಸಿದ್ದಾರೆ. ಹೊಸ ಶ್ರೇಯಾಂಕದಲ್ಲಿ, ರಾಹುಲ್ 11 ರಿಂದ 10 ನೇ ಸ್ಥಾನಕ್ಕೆ ಹಾರಿದ್ದಾರೆ. ಇದರ ಪರಿಣಾಮವಾಗಿ ಶ್ರೇಯಸ್ ಅಯ್ಯರ್ 10 ರಿಂದ 11 ನೇ ಸ್ಥಾನಕ್ಕೆ ಕುಸಿದಿದ್ದಾರೆ.