
2026 ರ ಟಿ20 ವಿಶ್ವಕಪ್ ನಡುವೆ ಐಸಿಸಿ, ಇತ್ತೀಚಿನ ಟಿ20 ರ್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಿಡುಗಡೆಯಾಗಿರುವ ನೂತನ ಪಟ್ಟಿಯಲ್ಲಿ ಟೀ ಇಂಡಿಯಾದ ಹೊಸ ಆರಂಭಿಕ ಆಟಗಾರ ಇಶಾನ್ ಕಿಶನ್ ಟಿ20 ವಿಶ್ವಕಪ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡುವ ಮೂಲಕ ಟಾಪ್ 10 ರಲ್ಲಿ ಸ್ಥಾನ ಪಡೆದಿದ್ದಾರೆ.

ಟಿ20 ರ್ಯಾಂಕಿಂಗ್ನಲ್ಲಿ 17 ಬ್ಯಾಟ್ಸ್‌ಮನ್‌ಗಳನ್ನು ಹಿಂದಿಕ್ಕಿರುವ ಕಿಶನ್ 8 ನೇ ಸ್ಥಾನವನ್ನು ತಲುಪಿದ್ದಾರೆ. ಇತ್ತ ಟಿ20 ವಿಶ್ವಕಪ್‌ನಲ್ಲಿ ಇನ್ನೂ ಖಾತೆ ತೆರೆಯದ ಅಭಿಷೇಕ್ ಶರ್ಮಾ ವಿಶ್ವದ ನಂಬರ್ 1 ಬ್ಯಾಟ್ಸ್‌ಮನ್ ಆಗಿ ಮುಂದುವರೆದಿದ್ದಾರೆ.

ಐಸಿಸಿ ಟಿ20 ಶ್ರೇಯಾಂಕದಲ್ಲಿ ಅಭಿಷೇಕ್ ಶರ್ಮಾ 891 ರೇಟಿಂಗ್ ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಫಿಲ್ ಸಾಲ್ಟ್ ಎರಡನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ವಿರುದ್ಧ ಅದ್ಭುತ ಶತಕ ಬಾರಿಸಿದ ಪಾಥುಮ್ ನಿಸ್ಸಂಕಾ ಮೂರು ಬ್ಯಾಟ್ಸ್‌ಮನ್‌ಗಳನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ತಲುಪಿದ್ದಾರೆ. ತಿಲಕ್ ವರ್ಮಾ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಪಾಕಿಸ್ತಾನದ ಸಾಹಿಬ್‌ಜಾದಾ ಫರ್ಹಾದನ್ ಎರಡು ಸ್ಥಾನ ಕುಸಿದು ಐದನೇ ಸ್ಥಾನಕ್ಕೆ ಇಳಿದಿದ್ದಾರೆ. ಸೂರ್ಯಕುಮಾರ್ ಯಾದವ್ ಆರನೇ ಸ್ಥಾನದಲ್ಲಿದ್ದರೆ, ಜೋಸ್ ಬಟ್ಲರ್ ಮೂರು ಸ್ಥಾನ ಕುಸಿದು 7ನೇ ಸ್ಥಾನಕ್ಕೆ ಇಳಿದಿದ್ದಾರೆ. ಇಶಾನ್ ಕಿಶನ್ 8ನೇ ಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್‌ನ ಟಿಮ್ ಸೀಫರ್ಟ್ 9ನೇ ಸ್ಥಾನ ಮತ್ತು ಟ್ರಾವಿಸ್ ಹೆಡ್ 10ನೇ ಸ್ಥಾನದಲ್ಲಿದ್ದಾರೆ.

ಬೌಲರ್‌ಗಳ ಶ್ರೇಯಾಂಕದಲ್ಲಿ, ವರುಣ್ ಚಕ್ರವರ್ತಿ ನಂ. 1 ಸ್ಥಾನದಲ್ಲಿ ಮುಂದುವರೆದಿದ್ದಾರೆ. ರಶೀದ್ ಖಾನ್ ಒಂದು ಸ್ಥಾನ ಜಿಗಿದು ಎರಡನೇ ಸ್ಥಾನಕ್ಕೆ ತಲುಪಿದ್ದಾರೆ. ಅಬ್ರಾರ್ ಅಹ್ಮದ್ ಮೂರನೇ ಸ್ಥಾನದಲ್ಲಿದ್ದರೆ, ಆದಿಲ್ ರಶೀದ್ ನಾಲ್ಕನೇ ಸ್ಥಾನ ಮತ್ತು ಜಿಂಬಾಬ್ವೆಯ ಬೌಲರ್ ಬ್ರಾಡ್ ಇವಾನ್ಸ್ 10 ಆಟಗಾರರನ್ನು ಹಿಂದಿಕ್ಕಿ 5 ನೇ ಸ್ಥಾನ ತಲುಪಿದ್ದಾರೆ.

ಉಳಿದಂತೆ ವನಿಂದು ಹಸರಂಗ ಆರನೇ ಸ್ಥಾನದಲ್ಲಿದ್ದರೆ, ಜಾಕೋಬ್ ಡಫಿ ಏಳನೇ ಸ್ಥಾನದಲ್ಲಿದ್ದಾರೆ. ಆಡಮ್ ಝಂಪಾ ಎಂಟನೇ ಸ್ಥಾನದಲ್ಲಿದ್ದರೆ, ಮುಸ್ತಾಫಿಜುರ್ ರೆಹಮಾನ್ ಒಂಬತ್ತನೇ ಸ್ಥಾನ ಮತ್ತು ಮೊಹಮ್ಮದ್ ನವಾಜ್ ಹತ್ತನೇ ಸ್ಥಾನದಲ್ಲಿದ್ದಾರೆ.