
ಐಸಿಸಿ ಬಿಡುಗಡೆ ಮಾಡಿರುವ ಟಿ20 ಬೌಲಿಂಗ್ ಶ್ರೇಯಾಂಕದಲ್ಲಿ ಟೀಂ ಇಂಡಯಾದ ಇಬ್ಬರು ಸ್ಪಿನ್ ಬೌಲರ್‌ಗಳಾದ ರವಿ ಬಿಷ್ಣೋಯ್ ಮತ್ತು ಅಕ್ಷರ್ ಪಟೇಲ್ ಭರ್ಜರಿ ಮುಂಬಡ್ತಿ ಪಡೆದಿದ್ದು, ಈ ಇಬ್ಬರೂ ಈಗ ಅಗ್ರ ಐದರೊಳಗೆ ಸ್ಥಾನ ಪಡೆದಿದ್ದಾರೆ.

ಭಾರತ ತಂಡವು ಈ ವರ್ಷದ ಜನವರಿ ತಿಂಗಳಲ್ಲಿ ತನ್ನ ಕೊನೆಯ ಟಿ20 ಸರಣಿಯನ್ನು ಆಡಿತ್ತು. ಅದರ ನಂತರ, ಈಗ ಟೀಮ್ ಇಂಡಿಯಾ ಜೂನ್ ತಿಂಗಳಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಈ ಸ್ವರೂಪದಲ್ಲಿ ನೇರವಾಗಿ ಸ್ಪರ್ಧಿಸಲಿದೆ. ಇಬ್ಬರೂ ಬೌಲರ್‌ಗಳು ದೀರ್ಘಕಾಲ ಆಡದಿದ್ದರೂ ಇತರ ಆಟಗಾರರ ಕಳಪೆ ಪ್ರದರ್ಶನದಿಂದ ಇಬ್ಬರೂ ಲಾಭ ಪಡೆದಿದ್ದಾರೆ.

ಈ ಹಿಂದೆ ಐದನೇ ಸ್ಥಾನದಲ್ಲಿದ್ದ ಅಕ್ಷರ್ ಪಟೇಲ್ ಈಗ 660 ರೇಟಿಂಗ್ ಪಾಯಿಂಟ್‌ಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ತಲುಪಿದ್ದಾರೆ. ರವಿ ಬಿಷ್ಣೋಯ್ 659 ರೇಟಿಂಗ್ ಅಂಕಗಳೊಂದಿಗೆ ಜಂಟಿಯಾಗಿ ಆರನೇ ಸ್ಥಾನದಲ್ಲಿದ್ದಾರೆ.

ಉಳಿದಂತೆ ಇಂಗ್ಲೆಂಡ್‌ನ ಲೆಗ್ ಸ್ಪಿನ್ನರ್ ಆದಿಲ್ ರಶೀದ್ 726 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಇತ್ತೀಚೆಗೆ ಅತ್ಯುತ್ತಮ ಪ್ರದರ್ಶನ ನೀಡಿದ ಶ್ರೀಲಂಕಾದ ಟಿ20 ನಾಯಕ ವನಿಂದು ಹಸರಂಗಾ 687 ರೇಟಿಂಗ್ನೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ವೆಸ್ಟ್ ಇಂಡೀಸ್ ಸ್ಪಿನ್ನರ್ ಅಕಿಲ್ ಹುಸೇನ್ ಕೂಡ ಇತ್ತೀಚಿನ ಟಿ20 ಬೌಲಿಂಗ್ ಶ್ರೇಯಾಂಕದಲ್ಲಿ ಒಂದು ಸ್ಥಾನ ಜಿಗಿದಿದ್ದು, 664 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನಕ್ಕೆ ತಲುಪಿದ್ದಾರೆ.

ಐಸಿಸಿ ಟಿ20 ಬೌಲಿಂಗ್ ಶ್ರೇಯಾಂಕದಲ್ಲಿ ಭಾರತ ತಂಡದ ಉಳಿದ ಆಟಗಾರರ ಸ್ಥಾನದ ಬಗ್ಗೆ ಮಾತನಾಡುವುದಾದರೆ, ಅರ್ಷದೀಪ್ ಸಿಂಗ್ 607 ರೇಟಿಂಗ್ ಪಾಯಿಂಟ್‌ಗಳೊಂದಿಗೆ 22 ನೇ ಸ್ಥಾನದಲ್ಲಿದ್ದರೆ, ಕುಲ್ದೀಪ್ ಯಾದವ್ ಒಂದು ಸ್ಥಾನ ಮೇಲೇರಿ 578 ರೇಟಿಂಗ್ ಪಾಯಿಂಟ್ ಪಡೆದು 24ನೇ ಸ್ಥಾನಕ್ಕೆ ತಲುಪಿದ್ದಾರೆ.