ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಮುಗಿದ ನಂತರ ಇಂದು ಬಿಡುಗಡೆಯಾಗಿರುವ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಭರ್ಜರಿ ಲಾಭ ಗಳಿಸಿದ್ದಾರೆ. ಸರಣಿಯಲ್ಲಿ ಅದ್ಭುತವಾಗಿ ಬ್ಯಾಟ್ ಬೀಸಿದ ಉಭಯರು ಇದೀಗ ಟೆಸ್ಟ್ ಶ್ರೇಯಾಂಕದಲ್ಲಿ ಟಾಪ್ 10ರೊಳಗೆ ಸ್ಥಾನ ಪಡೆದಿದ್ದಾರೆ.
ಐಸಿಸಿ ಇಂದು ಬಿಡುಗಡೆ ಮಾಡಿರುವ ನೂತನ ಟೆಸ್ಟ್ ಶ್ರೇಯಾಂಕದಲ್ಲಿ ಜೈಸ್ವಾಲ್ 8ನೇ ಸ್ಥಾನಕ್ಕೇರಿದ್ದು, ಪ್ರಸ್ತುತ ಶ್ರೇಯಾಂಕದಲ್ಲಿ 9ನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. ಈ ಹಿಂದಿನ ಶ್ರೇಯಾಂಕದಲ್ಲಿ 10ನೇ ಸ್ಥಾನದಲ್ಲಿದ್ದ ಜೈಸ್ವಾಲ್ ಇದೀಗ 740 ರೇಟಿಂಗ್‌ನೊಂದಿಗೆ 2 ಸ್ಥಾನ ಮೇಲೇರಿದ್ದಾರೆ.
ಯಶಸ್ವಿ ಜೈಸ್ವಾಲ್ ಜೊತೆಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ ಭರ್ಜರಿ ಮುಂಬಡ್ತಿ ಪಡೆದಿದ್ದಾರೆ. ಈ ಹಿಂದೆ ಟಾಪ್ 10 ರಿಂದ ಹೊರಗುಳಿದಿದ್ದ ರೋಹಿತ್, ಇದೀಗ ಟಾಪ್ 10ರೊಳಗೆ ಸ್ಥಾನ ಪಡೆದಿದ್ದಾರೆ. ಪ್ರಸ್ತುತ 751 ರೇಟಿಂಗ್ ಹೊಂದಿರುವ ರೋಹಿತ್ 5 ಸ್ಥಾನ ಮೇಲೇರಿ, 6ನೇ ಸ್ಥಾನವನ್ನು ಆಕ್ರಮಿಸಿಕೊಂಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಹಿಂದೆ ಸರಿದಿದ್ದ ವಿರಾಟ್ ಕೊಹ್ಲಿ ಒಂದು ಸ್ಥಾನ ಕಳೆದುಕೊಂಡಿದ್ದಾರೆ. ಈ ಹಿಂದೆ 8ನೇ ಸ್ಥಾನದಲ್ಲಿದ್ದ ವಿರಾಟ್, ಇದೀಗ 737 ರೇಟಿಂಗ್‌ನೊಂದಿಗೆ ಒಂಬತ್ತನೇ ಸ್ಥಾನದಲ್ಲಿದ್ದಾರೆ. ಮೇಲೆ ಹೇಳಿದಂತೆ ಕೊಹ್ಲಿ ಇಂಗ್ಲೆಂಡ್ ವಿರುದ್ಧ ಒಂದೇ ಒಂದು ಟೆಸ್ಟ್ ಆಡಿಲ್ಲ, ಆದರೂ ಅವರ ಸ್ಥಾನ ಟಾಪ್ 10 ರಲ್ಲಿ ಉಳಿದಿದೆ.
ಉಳಿದಂತೆ ಐಸಿಸಿ ಬಿಡುಗಡೆ ಮಾಡಿರುವ ರ್ಯಾಂಕಿಂಗ್‌ನಲ್ಲಿ ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ 859 ರೇಟಿಂಗ್‌ನೊಂದಿಗೆ ಪ್ರಸ್ತುತ ನಂಬರ್ ಒನ್ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಎರಡನೇ ಸ್ಥಾನದಲ್ಲಿರುವ ಇಂಗ್ಲೆಂಡ್‌ನ ರೂಟ್ಸ್ 824 ರೇಟಿಂಗ್ ಹೊಂದಿದ್ದಾರೆ.
ನಾವು ಮೂರನೇ ಸ್ಥಾನದ ಬಗ್ಗೆ ಮಾತನಾಡಿದರೆ, ಈ ಬಾರಿ ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಆಝಂ ಮೂರನೇ ಸ್ಥಾನವನ್ನು ಆಕ್ರಮಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವಾಸ್ತವವಾಗಿ ಬಾಬರ್ ಕೆಲವು ಸಮಯದಿಂದ ಟೆಸ್ಟ್ ಕ್ರಿಕೆಟ್ ಆಡಿಲ್ಲ. ಆದರೆ ಇತರ ಬ್ಯಾಟ್ಸ್‌ಮನ್‌ಗಳ ಕಳಪೆ ಪ್ರದರ್ಶನದಿಂದ ಬಾಬರ್‌ಗೆ ಲಾಭವಾಗಿದೆ. ಅವರು 768 ರೇಟಿಂಗ್‌ನೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
ನ್ಯೂಜಿಲೆಂಡ್‌ನ ಡ್ಯಾರಿಲ್ ಮಿಚೆಲ್ ಒಂದು ಸ್ಥಾನ ಮೇಲೇರಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ವಾಸ್ತವವಾಗಿ, ಅವರ ರೇಟಿಂಗ್ ಕೂಡ ಬಾಬರ್ ಅವರ ರೇಟಿಂಗ್ಗೆ ಸಮನಾಗಿದೆ. ಹೀಗಾಗಿ ಅವರನ್ನು ಮೂರನೇ ಸ್ಥಾನದಲ್ಲಿ ಮಾತ್ರ ಪರಿಗಣಿಸಬೇಕು, ಏಕೆಂದರೆ ನಾಲ್ಕನೇ ಸ್ಥಾನದಲ್ಲಿ ಯಾರೂ ಇಲ್ಲ.
ಇದೇ ವೇಳೆ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಎರಡು ಸ್ಥಾನ ಕುಸಿತ ಕಂಡಿದ್ದು, 757 ರೇಟಿಂಗ್‌ನೊಂದಿಗೆ 5 ನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ದಮುತ್ ಕರುಣರತ್ನೆ 750 ರೇಟಿಂಗ್‌ನೊಂದಿಗೆ ಏಳನೇ ಸ್ಥಾನದಲ್ಲಿದ್ದಾರೆ.
Published On - 2:37 pm, Wed, 13 March 24