Rachin Ravindra: ಕನ್ನಡಿಗ ರಚಿನ್ ರವೀಂದ್ರಗೆ ನ್ಯೂಜಿಲೆಂಡ್ ಅತ್ಯುತ್ತಮ ಕ್ರಿಕೆಟಿಗ ಪ್ರಶಸ್ತಿ
Rachin Ravindra: ಕಳೆದ ನವೆಂಬರ್ನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಕರ್ನಾಟಕ ಮೂಲಕ ನ್ಯೂಜಿಲೆಂಡ್ ಕ್ರಿಕೆಟಿಗ ರಚಿನ್ ರವೀಂದ್ರಗೆ 2023 ರ ನ್ಯೂಜಿಲೆಂಡ್‌ನ ವರ್ಷದ ಅತ್ಯುತ್ತಮ ಕ್ರಿಕೆಟಿಗ ಪ್ರಶಸ್ತಿ ಲಭಿಸಿದೆ.
Updated on: Mar 13, 2024 | 8:07 PM

ಕಳೆದ ನವೆಂಬರ್ನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಕರ್ನಾಟಕ ಮೂಲಕ ನ್ಯೂಜಿಲೆಂಡ್ ಕ್ರಿಕೆಟಿಗ ರಚಿನ್ ರವೀಂದ್ರಗೆ 2023 ರ ನ್ಯೂಜಿಲೆಂಡ್‌ನ ವರ್ಷದ ಅತ್ಯುತ್ತಮ ಕ್ರಿಕೆಟಿಗ ಪ್ರಶಸ್ತಿ ಲಭಿಸಿದೆ.

ಇದೀಗ 2023 ನೇ ಸಾಲಿನ ನ್ಯೂಜಿಲೆಂಡ್‌ನ ಅತ್ಯುತ್ತಮ ಕ್ರಿಕೆಟಿಗರಾಗಿ ಆಯ್ಕೆಯಾಗಿರುವ ರಚಿನ್ ರವೀಂದ್ರ ಅವರಿಗೆ ಸರ್ ರಿಚರ್ಡ್ ಹ್ಯಾಡ್ಲಿ ಪದಕವನ್ನು ನೀಡಲಾಗಿದೆ. ಈ ಮೂಲಕ ರಚಿನ್, ಸರ್ ರಿಚರ್ಡ್ ಹ್ಯಾಡ್ಲಿ ಪದಕವನ್ನು ಪಡೆದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ.

ಕೇವಲ 24 ನೇ ವಯಸ್ಸಿನಲ್ಲಿ ಸರ್ ರಿಚರ್ಡ್ ಹ್ಯಾಡ್ಲಿ ಪದಕ ಗೆದ್ದ ಅತ್ಯಂತ ಕಿರಿಯ ವಯಸ್ಸಿನ ಆಟಗಾರ ಎನಿಸಿಕೊಂಡಿರುವ ರಚಿನ್, ಕಳೆದ ಒಂದು ಸೀಸನ್ನಲ್ಲಿ ಟೆಸ್ಟ್ ಮತ್ತು ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ತಂಡದ ಪ್ರಮುಖ ಆಟಗಾರರಾಗಿ ಹೊರಹೊಮ್ಮಿದ್ದಾರೆ.

ಕಳೆದ ವರ್ಷ ಮಾರ್ಚ್‌ನಲ್ಲಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದ ರವೀಂದ್ರ ಭಾರತದಲ್ಲಿ ನಡೆದ ವಿಶ್ವಕಪ್‌ನಲ್ಲಿ 64 ರ ಸರಾಸರಿಯಲ್ಲಿ 578 ರನ್ ಗಳಿಸಿದ್ದರು. ಇದರಲ್ಲಿ ಮೂರು ಶತಕ ಮತ್ತು ಎರಡು ಅರ್ಧ ಶತಕಗಳು ಸೇರಿದ್ದವು. ಹೀಗಾಗಿ ರವೀಂದ್ರ ಅವರನ್ನು 2023 ರ ಐಸಿಸಿ ಅತ್ಯುತ್ತಮ ಉದಯೋನ್ಮುಖ ಆಟಗಾರರಾಗಿ ಆಯ್ಕೆ ಮಾಡಲಾಗಿತ್ತು.

ಇನ್ನು ರಚಿನ್ ರವೀಂದ್ರ ಮಾತ್ರವಲ್ಲದೆ ಟೆಸ್ಟ್ ಸ್ವರೂಪದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದ ಕೇನ್ ವಿಲಿಯಮ್ಸನ್ ಅವರನ್ನು ನ್ಯೂಜಿಲೆಂಡ್‌ನ ವರ್ಷದ ಅತ್ಯುತ್ತಮ ಟೆಸ್ಟ್ ಆಟಗಾರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಹಾಗೆಯೇ ಡೇರಿಲ್ ಮಿಚೆಲ್ ಅವರಿಗೆ ವರ್ಷದ ಏಕದಿನ ಆಟಗಾರ ಪ್ರಶಸ್ತಿ ಮತ್ತು ಮಿಚೆಲ್ ಸ್ಯಾಂಟ್ನರ್ಗೆ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
























