
ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಇಂಗ್ಲೆಂಡ್ನ ಮಾಜಿ ನಾಯಕ ಜೋ ರೂಟ್ ಇತ್ತೀಚಿನ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಮತ್ತೆ ನಂಬರ್ ಒನ್ ಸ್ಥಾನವನ್ನು ಆಕ್ರಮನಿಸಿಕೊಂಡಿದ್ದಾರೆ. ರೂಟ್ ಅಗ್ರಸ್ಥಾನಕ್ಕೇರಿದರಿಂದಾಗಿ ಇದುವರೆಗೆ ಮೊದಲ ಸ್ಥಾನದಲ್ಲಿದ್ದ ಹ್ಯಾರಿ ಬ್ರೂಕ್ 3ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಹ್ಯಾರಿ ಬ್ರೂಕ್ ಕಳೆದ ವಾರವಷ್ಟೇ ನಂಬರ್ ಒನ್ ಸ್ಥಾನವನ್ನು ಅಲಂಕರಿಸಿಕೊಂಡಿದ್ದರು. ಆದರೆ ಜುಲೈ 16 ರಂದು ಬಿಡುಗಡೆಯಾದ ಹೊಸ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಅವರೀಗ ನಂಬರ್ 1 ಸ್ಥಾನದಿಂದ 3 ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಭಾರತ ವಿರುದ್ಧದ ಲಾರ್ಡ್ಸ್ ಟೆಸ್ಟ್‌ನಲ್ಲಿ ಜೋ ರೂಟ್ ಉತ್ತಮ ಪ್ರದರ್ಶನ ನೀಡಿದ್ದರಿಂದ ಅವರಿಗೆ ಈ ಉಡುಗೊರೆ ಸಿಕ್ಕಿದೆ. ಲಾರ್ಡ್ಸ್ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಜೋ ರೂಟ್ 144 ರನ್ ಗಳಿಸಿದದರು. ಮೊದಲ ಇನ್ನಿಂಗ್ಸ್‌ನಲ್ಲಿ 104 ರನ್ ಬಾರಿಸಿದ್ದ ರೂಟ್, ಎರಡನೇ ಇನ್ನಿಂಗ್ಸ್‌ನಲ್ಲಿ 40 ರನ್ಗಳ ಕಾಣಿಕೆ ನೀಡಿದರು.

ಆದರೆ ನಂಬರ್ 1 ಸ್ಥಾನದಿಂದ ಕುಸಿದಿರುವ ಹ್ಯಾರಿ ಬ್ರೂಕ್ ಅವರ ಬ್ಯಾಟ್ ಲಾರ್ಡ್ಸ್ ಟೆಸ್ಟ್‌ನಲ್ಲಿ ವಿಶೇಷವಾದದ್ದೇನೂ ಮಾಡಲಿಲ್ಲ. ಎರಡೂ ಇನ್ನಿಂಗ್ಸ್‌ಗಳಲ್ಲಿ ಕೇವಲ 34 ರನ್ ಕಲೆಹಾಕಿದ್ದ ಬ್ರೂಕ್ ಮೊದಲ ಇನ್ನಿಂಗ್ಸ್‌ನಲ್ಲಿ 11 ರನ್ ಬಾರಿಸಿದರೆ, ಎರಡನೇ ಇನ್ನಿಂಗ್ಸ್‌ನಲ್ಲಿ 23 ರನ್‌ಗಳಿಗೆ ಸುಸ್ತಾಗಿದ್ದರು.

ಉಳಿದಂತೆ 867 ರೇಟಿಂಗ್ ಅಂಕಗಳನ್ನು ಹೊಂದಿರುವ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಕೇನ್ ವಿಲಿಯಮ್ಸನ್ ಎರಡನೇ ಸ್ಥಾನಕ್ಕೆ ಬಂದಿದ್ದರೆ, ಜೋ ರೂಟ್ 888 ರೇಟಿಂಗ್ ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿದ ಹ್ಯಾರಿ ಬ್ರೂಕ್ 862 ರೇಟಿಂಗ್ ಅಂಕಗಳನ್ನು ಹೊಂದಿದ್ದಾರೆ.

ಹೊಸ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಭಾರತದ ಶುಭ್ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಅವರ ಸ್ಥಿತಿಯೂ ಉತ್ತಮವಾಗಿಲ್ಲ. ಯಶಸ್ವಿ ಜೈಸ್ವಾಲ್ ಅಗ್ರ 5 ರಿಂದ ಹೊರಗುಳಿಯುವ ಅಂಚಿನಲ್ಲಿದ್ದರೆ, ಶುಭ್ಮನ್ ಗಿಲ್ ಅಗ್ರ 10 ರಿಂದ ಹೊರಗುಳಿಯುವ ಅಪಾಯದಲ್ಲಿದ್ದಾರೆ.

ಹೊಸ ಟೆಸ್ಟ್ ಶ್ರೇಯಾಂಕದಲ್ಲಿ, ಸ್ಟೀವ್ ಸ್ಮಿತ್ ಯಶಸ್ವಿ ಜೈಸ್ವಾಲ್ ಅವರನ್ನು 5 ನೇ ಸ್ಥಾನಕ್ಕೆ ತಳ್ಳಿ 4 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಶುಭ್ಮನ್ ಗಿಲ್ 3 ಸ್ಥಾನ ಕುಸಿದು 9 ನೇ ಸ್ಥಾನಕ್ಕೆ ತಲುಪಿದ್ದಾರೆ. ರಿಷಭ್ ಪಂತ್ ಕೂಡ ಹೊಸ ಶ್ರೇಯಾಂಕದಲ್ಲಿ ಒಂದು ಸ್ಥಾನವನ್ನು ಕಳೆದುಕೊಂಡಿದ್ದು, 7 ನೇ ಸ್ಥಾನದಿಂದ 8 ನೇ ಸ್ಥಾನಕ್ಕೆ ಜಾರಿದ್ದಾರೆ.