Updated on: Jun 26, 2023 | 10:24 PM
ICC World Cup Qualifiers 2023: ಹರಾರೆಯ ತಕಾಶಿಂಗಾ ಸ್ಪೋರ್ಟ್ಸ್ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ಸೂಪರ್ ಓವರ್ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ನೆದರ್ಲ್ಯಾಂಡ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿತು.
ಇನ್ನು ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡಕ್ಕೆ ಬ್ರೆಂಡನ್ ಕಿಂಗ್ (76) ಹಾಗೂ ಜಾನ್ಸನ್ ಚಾರ್ಲ್ಸ್ (54) ಭರ್ಜರಿ ಆರಂಭ ಒದಗಿಸಿದ್ದರು. ಇವರಿಬ್ಬರ ನಿರ್ಗಮನದ ಬಳಿಕ ಜೊತೆಯಾದ ಶಾಯ್ ಹೋಪ್ ಹಾಗೂ ನಿಕೋಲಸ್ ಪೂರನ್ ಇನಿಂಗ್ಸ್ ಕಟ್ಟಿದರು.
ಇದರ ನಡುವೆ 47 ರನ್ ಬಾರಿಸಿದ್ದ ಶಾಯ್ ಹೋಪ್ ವಿಕೆಟ್ ಒಪ್ಪಿಸಿದ್ದರು. ಆದರೆ ಮತ್ತೊಂದೆಡೆ ಬಿರುಗಾಳಿ ಬ್ಯಾಟಿಂಗ್ ಪ್ರದರ್ಶಿಸಿದ ನಿಕೋಲಸ್ ಪೂರನ್ ನೆದರ್ಲ್ಯಾಂಡ್ಸ್ ಬೌಲರ್ಗಳ ಬೆಂಡೆತ್ತಿದರು.
ಪರಿಣಾಮ ನಿಕೋಲಸ್ ಪೂರನ್ ಬ್ಯಾಟ್ನಿಂದ ಕೇವಲ 63 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 9 ಫೋರ್ನೊಂದಿಗೆ ಶತಕ ಮೂಡಿಬಂತು. ಅಲ್ಲದೆ ಅಂತಿಮವಾಗಿ 65 ಎಸೆತಗಳಲ್ಲಿ ಅಜೇಯ 104 ರನ್ ಬಾರಿಸಿದರು. ಇದರೊಂದಿಗೆ ನಿಗದಿತ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ ವೆಸ್ಟ್ ಇಂಡೀಸ್ ತಂಡವು 374 ರನ್ ಕಲೆಹಾಕಿತು.
375 ರನ್ಗಳ ಕಠಿಣ ಗುರಿ ಪಡೆದ ನೆದರ್ಲ್ಯಾಂಡ್ಸ್ ತಂಡವು ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ವೆಸ್ಟ್ ಇಂಡೀಸ್ ಬೌಲರ್ಗಳನ್ನು ಆತ್ಮ ವಿಶ್ವಾಸದಿಂದಲೇ ಎದುರಿಸಿದ ನೆದರ್ಲ್ಯಾಂಡ್ಸ್ 30ನೇ ಓವರ್ನಲ್ಲಿ 4 ವಿಕೆಟ್ ನಷ್ಟಕ್ಕೆ 170 ರನ್ ಕಲೆಹಾಕಿತು.
ಈ ಹಂತದಲ್ಲಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಭಾರತೀಯ ಮೂಲದ ತೇಜ ನಿಡಮನೂರು ತೂಫಾನ್ ಬ್ಯಾಟಿಂಗ್ ಪ್ರದರ್ಶಿಸಿದರು. ವಿಂಡೀಸ್ ದಾಳಿಗೆ ಬ್ಯಾಟ್ ಮೂಲಕವೇ ಪ್ರತಿ ದಾಳಿ ನಡೆಸಿದ ತೇಜ ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಅಲ್ಲದೆ ಕೇವಲ 68 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿದರು.
ತೇಜ ನಿಡಮನೂರು ಅವರ ಭರ್ಜರಿ ಬ್ಯಾಟಿಂಗ್ ಪರಿಣಾಮ ನೆದರ್ಲ್ಯಾಂಡ್ಸ್ ತಂಡಕ್ಕೆ ಕೊನೆಯ 5 ಓವರ್ಗಳಲ್ಲಿ 53 ರನ್ಗಳ ಅವಶ್ಯಕತೆಯಿತ್ತು. ಆದರೆ ಈ ಹಂತದಲ್ಲಿ 76 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 11 ಫೋರ್ ಬಾರಿಸಿದ್ದ ತೇಜ (111) ಜೇಸನ್ ಹೋಲ್ಡರ್ಗೆ ವಿಕೆಟ್ ಒಪ್ಪಿಸಿದರು.
ಇದಾಗ್ಯೂ ಲೋಗನ್ ವ್ಯಾನ್ ಬೀಕ್ ಹೋರಾಟ ಮುಂದುವರೆಸಿದರು. ಕೊನೆಯ 2 ಓವರ್ಗಳಲ್ಲಿ 30 ರನ್ಗಳ ಅವಶ್ಯಕತೆಯಿತ್ತು. ಆರ್ಯನ್ ದತ್ ಹಾಗೂ ಲೋಗನ್ ಜೊತೆಗೂಡಿ 21 ರನ್ ಚಚ್ಚಿದರು. ಅದರಂತೆ ಕೊನೆಯ ಓವರ್ನಲ್ಲಿ 9 ರನ್ಗಳ ಅಗತ್ಯತೆಯಿತ್ತು.
ಅಲ್ಝಾರಿ ಜೋಸೆಫ್ ಎಸೆದ ಅಂತಿಮ ಓವರ್ನಲ್ಲಿ ನೆದರ್ಲ್ಯಾಂಡ್ಸ್ ತಂಡವು 8 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಉಭಯ ತಂಡಗಳ ಸ್ಕೋರ್ 374 ಸಮಬಲದೊಂದಿಗೆ ಪಂದ್ಯವು ಟೈ ಆಯಿತು. ಅಲ್ಲದೆ ಪಂದ್ಯವು ಸೂಪರ್ ಓವರ್ನತ್ತ ಸಾಗಿತು.
ಸೂಪರ್ ಓವರ್ನಲ್ಲಿ ಮೊದಲು ಬ್ಯಾಟ್ ಮಾಡಿದ ನೆದರ್ಲ್ಯಾಂಡ್ಸ್ ಲೋಗನ್ ವ್ಯಾನ್ ಬೀಕ್ ಹಾಗೂ ಎಡ್ವರ್ಡ್ಸ್ ಕಣಕ್ಕಿಳಿದರು. ಜೇಸನ್ ಹೋಲ್ಡರ್ ಎಸೆದ ಈ ಓವರ್ನ ಮೊದಲ ಎಸೆತದಲ್ಲಿ ಫೋರ್, 2ನೇ ಎಸೆತದಲ್ಲಿ ಸಿಕ್ಸ್, 3ನೇ ಎಸೆತದಲ್ಲಿ ಫೋರ್, 4ನೇ ಎಸೆತದಲ್ಲಿ ಸಿಕ್ಸ್, 5ನೇ ಎಸೆತದಲ್ಲಿ ಸಿಕ್ಸ್, 6ನೇ ಎಸೆತದಲ್ಲಿ ಫೋರ್ ಬಾರಿಸುವ ಲೋಗನ್ ವ್ಯಾನ್ ಬೀಕ್ ಬರೋಬ್ಬರಿ 30 ರನ್ ಚಚ್ಚಿದರು.
31 ರನ್ಗಳ ಟಾರ್ಗೆಟ್ನೊಂದಿಗೆ ಸೂಪರ್ ಓವರ್ ಆರಂಭಿಸಿದ ವೆಸ್ಟ್ ಇಂಡೀಸ್ ತಂಡವು 5 ಎಸೆತಗಳಲ್ಲಿ 8 ರನ್ಗಳಿಸುವಷ್ಟರಲ್ಲಿ ಇಬ್ಬರು ಬ್ಯಾಟರ್ಗಳು ಔಟಾದರು. ಇದರೊಂದಿಗೆ ನೆದರ್ಲ್ಯಾಂಡ್ಸ್ ತಂಡವು ಬೃಹತ್ ಮೊತ್ತ ಬೆನ್ನತ್ತಿ ಸೂಪರ್ ಓವರ್ ಗೆಲುವನ್ನು ತನ್ನದಾಗಿಸಿಕೊಂಡಿತು.