
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೊದಲ ಪಂದ್ಯವನ್ನು ಗೆಲ್ಲುವ ಮೂಲಕ ಪಾಕಿಸ್ತಾನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಟ್ಟಿಯಲ್ಲಿ ದೊಡ್ಡ ಜಿಗಿತ ಕಂಡಿತ್ತು. ಪಾಕಿಸ್ತಾನ ಮೊದಲ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು 93 ರನ್‌ಗಳಿಂದ ಸೋಲಿಸಿ ಪಾಯಿಂಟ್ ಪಟ್ಟಿಯಲ್ಲಿ 100 ಪ್ರತಿಶತ ಗೆಲುವಿನ ಶೇಕಡಾವಾರು ಪ್ರಮಾಣದೊಂದಿಗೆ ಎರಡನೇ ಸ್ಥಾನದಲ್ಲಿ ಕುಳಿತಿತ್ತು. ಆದರೆ ಕೇವಲ 8 ದಿನಗಳ ಅಂತರದಲ್ಲಿ ಪಾಕ್ ತಂಡ ತನ್ನ ಸ್ಥಾನವನ್ನು ಕಳೆದುಕೊಂಡಿದೆ.

ರಾವಲ್ಪಿಂಡಿಯಲ್ಲಿ ನಡೆದ ಎರಡನೇ ಟೆಸ್ಟ್‌ನ ಮೂರನೇ ದಿನದಂದು ದಕ್ಷಿಣ ಆಫ್ರಿಕಾ ಪಾಕಿಸ್ತಾನವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿತು. ಇದರೊಂದಿಗೆ, ಎರಡು ಪಂದ್ಯಗಳ ಟೆಸ್ಟ್‌ಗಳ ಸರಣಿಯು 1-1 ರಲ್ಲಿ ಸಮಬಲಗೊಂಡಿದೆ. ಆದಗ್ಯೂ ಪಾಕಿಸ್ತಾನದ ಸೋಲು ಟೀಂ ಇಂಡಿಯಾಕ್ಕೆ ಲಾಭ ಮಾಡಿಕೊಟ್ಟಿದ್ದು, ಡಬ್ಲ್ಯುಟಿಸಿ ಪಾಯಿಂಟ್ ಪಟ್ಟಿಯಲ್ಲಿ ಟೀಂ ಇಂಡಿಯಾ ನಾಲ್ಕನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಜಿಗಿದಿದ್ದರೆ, ಪಾಕಿಸ್ತಾನ ತಂಡ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.

ಆಸ್ಟ್ರೇಲಿಯಾ ಇಲ್ಲಿಯವರೆಗೆ 3 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಮೂರು ಪಂದ್ಯಗಳನ್ನು ಗೆದ್ದಿದೆ. ಈ ಮೂಲಕ 100 ಗೆಲುವಿನ ಶೇಕಡಾವಾರು ಪ್ರಮಾಣದೊಂದಿಗೆ ಮೊದಲ ಸ್ಥಾನದಲ್ಲಿದೆ. ಶ್ರೀಲಂಕಾ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಒಂದು ಪಂದ್ಯವನ್ನು ಗೆದ್ದು ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಆದ್ದರಿಂದ, 66.67 ಗೆಲುವಿನ ಶೇಕಡಾವಾರು ಪ್ರಮಾಣದೊಂದಿಗೆ ಎರಡನೇ ಸ್ಥಾನದಲ್ಲಿದೆ.

ಭಾರತ ಇದುವರೆಗೆ ಒಟ್ಟು 7 ಟೆಸ್ಟ್ ಪಂದ್ಯಗಳನ್ನು ಆಡಿದೆ. ಇದರಲ್ಲಿ 4 ಟೆಸ್ಟ್ ಪಂದ್ಯಗಳನ್ನು ಗೆದ್ದಿದ್ದರೆ, 2 ಟೆಸ್ಟ್ ಪಂದ್ಯಗಳನ್ನು ಸೋತಿದೆ. ಉಳಿದಂತೆ ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಇದರೊಂದಿಗೆ, ಭಾರತದ ಗೆಲುವಿನ ಶೇಕಡಾವಾರು ಪ್ರಮಾಣ 61.90 ಆಗಿದ್ದು, ಮೂರನೇ ಸ್ಥಾನದಲ್ಲಿದೆ.

ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ನಡುವೆ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆದಿತ್ತು. ಸರಣಿ ಡ್ರಾದಲ್ಲಿ ಕೊನೆಗೊಂಡ ಕಾರಣ, ಎರಡೂ ತಂಡಗಳು ಗೆಲುವಿನ ಶೇಕಡಾವಾರು 50 ಹೊಂದಿದ್ದು, ಜಂಟಿಯಾಗಿ ನಾಲ್ಕನೇ ಸ್ಥಾನದಲ್ಲಿವೆ. ಉಳಿದಂತೆ ಇಂಗ್ಲೆಂಡ್ 43.33 ರ ಗೆಲುವಿನ ಶೇಕಡಾವಾರುವಿನೊಂದಿಗೆ ಆರನೇ ಸ್ಥಾನದಲ್ಲಿದೆ.

ಬಾಂಗ್ಲಾದೇಶ ಏಳನೇ ಸ್ಥಾನದಲ್ಲಿದ್ದು, ಆಡಿರುವ ಎರಡು ಪಂದ್ಯಗಳಲ್ಲಿ ಒಂದನ್ನು ಸೋತು, ಒಂದನ್ನು ಡ್ರಾ ಮಾಡಿಕೊಂಡಿದೆ. ಆದ್ದರಿಂದ, ಅದರ ಗೆಲುವಿನ ಶೇಕಡಾವಾರು 16.67 ಆಗಿದೆ. ನ್ಯೂಜಿಲೆಂಡ್ ಎಂಟನೇ ಸ್ಥಾನದಲ್ಲಿದ್ದು, ಇದುವರೆಗೆ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ವೆಸ್ಟ್ ಇಂಡೀಸ್ ಕೊನೆಯ ಸ್ಥಾನದಲ್ಲಿದ್ದು, ಆಡಿರುವ ಎಲ್ಲಾ 5 ಪಂದ್ಯಗಳಲ್ಲಿ ಸೋತಿದೆ.