
ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ (Rishabh Pant) ಕಂಬ್ಯಾಕ್ ಪಂದ್ಯದಲ್ಲೇ ಅಬ್ಬರಿಸಿದ್ದಾರೆ. ಸೌತ್ ಆಫ್ರಿಕಾ ಎ ವಿರುದ್ಧದ ಪಂದ್ಯದಲ್ಲಿ ಭಾರತ ಎ ತಂಡದ ನಾಯಕನಾಗಿ ಕಣಕ್ಕಿಳಿದಿರುವ ಪಂತ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ.

ಬೆಂಗಳೂರಿನ ಸೆಂಟ್ರಲ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಿಷಭ್ ಪಂತ್ ವಿಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಎಡಗೈ ದಾಂಡಿಗ ಸೌತ್ ಆಫ್ರಿಕಾ ಬೌಲರ್ಗಳ ಬೆಂಡೆತ್ತಿದರು.

ಪರಿಣಾಮ ರಿಷಭ್ ಪಂತ್ ಬ್ಯಾಟ್ನಿಂದ 65 ಎಸೆತಗಳಲ್ಲಿ ಅರ್ಧಶತಕ ಮೂಡಿಬಂತು. ಈ ಅರ್ಧಶತಕದ ಬಳಿಕ ಕೂಡ ಸಿಡಿಲಬ್ಬರದ ಮುಂದುವರೆಸಿದ ಪಂತ್ 113 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್ ಹಾಗೂ 11 ಫೋರ್ಗಳೊಂದಿಗೆ 90 ರನ್ ಬಾರಿಸಿದರು.

ಆದರೆ ಶತಕದಂಚಿನಲ್ಲಿ ಬಿರುಸಿನ ಹೊಡೆತಕ್ಕೆ ಮುಂದಾದ ರಿಷಭ್ ಪಂತ್ ಸೌತ್ ಆಫ್ರಿಕಾ ಟಿಯಾನ್ ವ್ಯಾನ್ ವುರೆನ್ ಎಸೆತದಲ್ಲಿ ರಿವಾಲ್ಡೊಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಪಂತ್ ಔಟಾದ ಬಳಿಕ ಟೀಮ್ ಇಂಡಿಯಾದ ಗೆಲುವಿನ ನೊಗ ಹೊತ್ತ ಅನ್ಶುಲ್ ಕಂಬೋಜ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.

ಅಂತಿಮ ಹಂತದಲ್ಲಿ ಅನ್ಶುಲ್ ಕಂಬೋಜ್ ಬಾರಿಸಿದ 37 ರನ್ಗಳ ನೆರವಿನೊಂದಿಗೆ ಟೀಮ್ ಇಂಡಿಯಾ 277 ರನ್ಗಳ ಗುರಿ ತಲುಪಿತು. ಈ ಮೂಲಕ ಸೌತ್ ಆಫ್ರಿಕಾ ಎ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು 3 ವಿಕೆಟ್ಗಳ ರೋಚಕ ಜಯ ಸಾಧಿಸಿದೆ.