ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಡಿಸೆಂಬರ್ 10 ರಂದು ಪ್ರಾರಂಭವಾಗುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕಾಗಿ ಭಾರತದ ತಂಡವನ್ನು ಪ್ರಕಟಿಸಿದೆ. ಹರಿಣಗಳ ನಾಡಲ್ಲಿ ಟೀಮ್ ಇಂಡಿಯಾ ಒಟ್ಟು ಮೂರು ಏಕದಿನ, ಮೂರು ಟಿ20I ಗಳು ಮತ್ತು ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಇದಕ್ಕಾಗಿ ಗುರುವಾರ ಸಂಜೆ ಬಿಸಿಸಿಐ ಆಯ್ಕೆ ಸಮಿತಿ ಆಟಗಾರರನ್ನು ಹೆಸರಿಸಿದೆ. ಇದರಲ್ಲಿ ಕೆಲವು ಅಚ್ಚರಿಯ ಆಯ್ಕೆಗಳು ಕಂಡುಬಂದವು.
2024 ರ ಟಿ20 ವಿಶ್ವಕಪ್ ಸಮೀಪಿಸುತ್ತಿರುವ ಮಧ್ಯೆ ಮತ್ತು ಟೆಸ್ಟ್‌ಗಳೊಂದಿಗೆ ಟಿ20I ಸರಣಿಯ ಮೇಲೆ ಕೇಂದ್ರೀಕರಿಸಿ, ಭಾರತವು ದಕ್ಷಿಣ ಆಫ್ರಿಕಾದ ನೆಲದಲ್ಲಿ ಸರಣಿಯನ್ನು ಗೆಲ್ಲುವ ಗುರಿಯನ್ನು ಹೊಂದಿದೆ. ಆದರೆ, ಅಚ್ಚರಿ ಎಂಬಂತೆ ಭಾರತದ 2023 ರ ವಿಶ್ವಕಪ್ ತಂಡದಲ್ಲಿದ್ದ ಕೇವಲ ಮೂರು ಆಟಗಾರರನ್ನು ಉಳಿಸಿಕೊಂಡು ಸಂಪೂರ್ಣ ಬದಲಾವಣೆ ಮಾಡಿದೆ.
ದಕ್ಷಿಣ ಆಫ್ರಿಕಾ ಪ್ರವಾಸದ ಏಕದಿನ ಸರಣಿಯಲ್ಲಿ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸಲಿದ್ದು, ನಾಯಕ ರೋಹಿತ್ ಶರ್ಮಾ ಮತ್ತು ಉಪನಾಯಕ ಹಾರ್ದಿಕ್ ಪಾಂಡ್ಯ ಗೈರು ಹಾಜರಾಗಿದ್ದಾರೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಲಿರುವ ಮೆಗಾ ಈವೆಂಟ್‌ನಲ್ಲಿ ರಾಹುಲ್ ಹೊರತುಪಡಿಸಿ, ಶ್ರೇಯಸ್ ಅಯ್ಯರ್ ಮತ್ತು ಕುಲ್ದೀಪ್ ಯಾದವ್ ಮಾತ್ರ ವಿಶ್ವಕಪ್ ಆಡಿದ ಸದಸ್ಯರಾಗಿದ್ದಾರೆ.
ಭಾರತದ ವಿಶ್ವಕಪ್ ತಂಡದಲ್ಲಿದ್ದ ಒಟ್ಟು 12 ಆಟಗಾರರು ಏಕದಿನ ಸರಣಿಯ ಭಾಗವಾಗಿಲ್ಲ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಏಕದಿನ ಮತ್ತು ಟಿ20ಐ ಸರಣಿಯಿಂದಲೂ ಹೊರಗುಳಿದಿದ್ದಾರೆ ಎಂದು ಬಿಸಿಸಿಐ ಬಹಿರಂಗಪಡಿಸಿದೆ. ಅವರು ಏಕದಿನ ಹಾಗೂ ಟಿ20ಗೆ ತಮ್ಮನ್ನು ಪರಿಗಣಿಸದಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಮನವಿ ಮಾಡಿದ್ದರು ಎನ್ನಲಾಗಿದೆ.
ಉಳಿದಂತೆ ಸಾಯಿ ಸುದರ್ಶನ್, ರಿಂಕು ಸಿಂಗ್, ಮತ್ತು ರಜಿತ್ ಪಟಿದಾರ್ ಅವರು ಏಕದಿನ ಸ್ವರೂಪಕ್ಕೆ ಇದೇ ಮೊದಲ ಬಾರಿಗೆ ಆಯ್ಕೆ ಆಗಿದ್ದಾರೆ. ಹಾಗೆಯೆ ಯುಜ್ವೇಂದ್ರ ಚಹಲ್ ಮತ್ತು ಸಂಜು ಸ್ಯಾಮ್ಸನ್ ಕಮ್ಬ್ಯಾಕ್ ಮಾಡಿದ್ದಾರೆ. ಮೂರು ಏಕದಿನ ಪಂದ್ಯಗಳು ಡಿಸೆಂಬರ್ 17, 19 ಮತ್ತು 21 ರಂದು ನಡೆಯಲಿವೆ.
ಯಾರು ಇನ್? - ರುತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್, ತಿಲಕ್ ವರ್ಮಾ, ರಜತ್ ಪಟಿದಾರ್, ರಿಂಕು ಸಿಂಗ್, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಹಲ್, ಮುಖೇಶ್ ಕುಮಾರ್, ಅವೇಶ್ ಖಾನ್, ಅರ್ಶ್ದೀಪ್ ಸಿಂಗ್, ದೀಪಕ್ ಚಹರ್.
ಯಾರು ಔಟ್? - ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಇಶಾನ್ ಕಿಶನ್, ಪ್ರಸಿದ್ಧ್ ಕೃಷ್ಣ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್.
ದಕ್ಷಿಣ ಆಫ್ರಿಕಾದ ಏಕದಿನ ಸರಣಿಗೆ ಭಾರತ ತಂಡ: ರುತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್, ತಿಲಕ್ ವರ್ಮಾ, ರಜತ್ ಪಟಿದಾರ್, ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ನಾಯಕ-ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಾಲ್, ಮುಖೇಶ್ ಕುಮಾರ್, ಅವೇಶ್ ಖಾನ್, ಅರ್ಶ್ದೀಪ್ ಸಿಂಗ್, ದೀಪಕ್ ಚಹರ್.
Published On - 7:15 am, Fri, 1 December 23