
ವೋರ್ಸೆಸ್ಟರ್ನ ನ್ಯೂ ರೋಡ್ ಮೈದಾನದಲ್ಲಿ ನಡೆದ ಭಾರತ ಅಂಡರ್-19 ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಅಂಡರ್ 19 ತಂಡದ ಯುವ ದಾಂಡಿಗ ರಾಕಿ ಫ್ಲಿಂಟಾಫ್ (Rocky Flintoff) ಭರ್ಜರಿ ಶತಕ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಥಾಮಸ್ ರೆವ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಯುವ ದಾಂಡಿಗ ವೈಭವ್ ಸೂರ್ಯವಂಶಿ ಸ್ಫೋಟಕ ಸೆಂಚುರಿ ಸಿಡಿಸಿದ್ದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ವೈಭವ್ ಕೇವಲ 52 ಎಸೆತಗಳಲ್ಲಿ ಶತಕ ಪೂರೈಸಿದರು. ಅಲ್ಲದೆ 78 ಎಸೆತಗಳಲ್ಲಿ 10 ಸಿಕ್ಸ್ ಹಾಗೂ 13 ಫೋರ್ಗಳೊಂದಿಗೆ 143 ರನ್ ಬಾರಿಸಿದರು.

ಮತ್ತೊಂದೆಡೆ ವೈಭವ್ ಸೂರ್ಯವಂಶಿಗೆ ಉತ್ತಮ ಸಾಥ್ ನೀಡಿದ ವಿಹಾನ್ ಮಲ್ಹೋತ್ರ 128 ರನ್ಗಳ ಇನಿಂಗ್ಸ್ ಆಡಿದರು. ಈ ಎರಡು ಭರ್ಜರಿ ಶತಕಗಳ ನೆರವಿನೊಂದಿಗೆ ಟೀಮ್ ಇಂಡಿಯಾ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 363 ರನ್ಗಳನ್ನು ಕಲೆಹಾಕಿತು.

364 ರನ್ಗಳ ಕಠಿಣ ಗುರಿ ಪಡೆದ ಇಂಗ್ಲೆಂಡ್ ಪರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಾಕಿ ಫ್ಲಿಂಟಾಫ್ ಸ್ಫೋಟಕ ಬ್ಯಾಟಿಂಗ್ನೊಂದಿಗೆ ಅಬ್ಬರಿಸಿದರು. ಟೀಮ್ ಇಂಡಿಯಾ ಬೌಲರ್ಗಳನ್ನು ಆತ್ಮ ವಿಶ್ವಾಸದಿಂದಲೇ ಎದುರಿಸಿದ ರಾಕಿ 88 ಎಸೆತಗಳಲ್ಲಿ ಶತಕ ಪೂರೈಸಿದರು. ಅಲ್ಲದೆ 91 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 107 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ವಿಶೇಷ ಎಂದರೆ ಇಂಗ್ಲೆಂಡ್ ಪರ ಹೊಸ ಭರವಸೆ ಮೂಡಿಸಿರುವ ರಾಕಿ ಫ್ಲಿಂಟಾಫ್ ಮಾಜಿ ಆಲ್ರೌಂಡರ್ ಆಂಡ್ರ್ಯೂ ಫ್ಲಿಂಟಾಫ್ ಅವರ ಸುಪುತ್ರ. ಆ್ಯಂಡ್ರ್ಯೂ ಫ್ಲಿಂಟಾಫ್ ಇಂಗ್ಲೆಂಡ್ ಪರ 79 ಟೆಸ್ಟ್, 141 ಏಕದಿನ ಹಾಗೂ 7 ಟಿ20 ಪಂದ್ಯಗಳನ್ನಾಡಿದ್ದಾರೆ. ಇದೀಗ ತಂದೆಯ ಹಾದಿಯನ್ನು ತುಳಿದಿರುವ ರಾಕಿ ಫ್ಲಿಂಟಾಫ್ 17ನೇ ವಯಸ್ಸಿನಲ್ಲೇ ಶತಕ ಸಿಡಿಸಿ ಗಮನ ಸೆಳೆದಿದ್ದಾರೆ.

ಇನ್ನು ರಾಕಿ ಫ್ಲಿಂಟಾಫ್ ಅವರ ಈ ಶತಕದ ಹೊರತಾಗಿಯೂ ಈ ಪಂದ್ಯದಲ್ಲಿ ಗೆಲುವು ದಾಖಲಿಸುವಲ್ಲಿ ಇಂಗ್ಲೆಂಡ್ ತಂಡ ವಿಫಲವಾಯಿತು. 45.3 ಓವರ್ಗಳಲ್ಲಿ 308 ರನ್ಗಳಿಸಿ ಸರ್ವಪತನ ಕಾಣುವ ಮೂಲಕ ಯಂಗ್ ಇಂಗ್ಲೆಂಡ್ ಸೋಲೊಪ್ಪಿಕೊಂಡಿತು. ಇತ್ತ 55 ರನ್ಗಳ ವಿಜಯದೊಂದಿಗೆ ಟೀಮ್ ಇಂಡಿಯಾ ಏಕದಿನ ಸರಣಿಯನ್ನು ವಶಪಡಿಸಿಕೊಂಡಿದೆ.