
ಮೊಹಾಲಿಯಲ್ಲಿ ನಡೆಯುತ್ತಿರುವ ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಮೊದಲು ಬೌಲ್ ಮಾಡಿದ ಟೀಂ ಇಂಡಿಯಾ, ಅಫ್ಘಾನ್ ತಂಡವನ್ನು 159 ರನ್ಗಳಿಗೆ ಕಟ್ಟಿಹಾಕಿದೆ. ಈ ಗುರಿ ಬೆನ್ನಟ್ಟಿರುವ ಭಾರತ ಕೂಡ ಗೆಲುವಿನ ಹಾದಿಯಲ್ಲಿದೆ.

ಆದರೆ ಈ ಪಂದ್ಯದಲ್ಲಿ ಬರೋಬ್ಬರಿ 14 ತಿಂಗಳ ನಂತರ ಭಾರತ ಟಿ20 ತಂಡಕ್ಕೆ ಮರಳಿದ್ದ ನಾಯಕ ರೋಹಿತ್ ಶರ್ಮಾ ಖಾತೆ ತೆರೆಯದೆ ಔಟಾದರು. ಇದು ಆರಂಭದಲ್ಲಿ ಭಾರತಕ್ಕೆ ಆರಂಭಿಕ ಹಿನ್ನಡೆಯನ್ನುಂಟು ಮಾಡಿತು. ಆದರೆ ಈಗ ಸುದಾರಿಸಿಕೊಂಡಿರುವ ಭಾರತ ಉತ್ತಮ ಬ್ಯಾಟಿಂಗ್ ಮಾಡುತ್ತಿದೆ.

ಈ ಪಂದ್ಯದಲ್ಲಿ ನಾಯಕ ರೋಹಿತ್ ಶೂನ್ಯಕ್ಕೆ ಔಟಾದರು ಅವರ ಹೆಸರಿನಲ್ಲಿ ಅಪರೂಪದ ದಾಖಲೆಯೊಂದು ಸೃಷ್ಟಿಯಾಗಿದೆ. ಅಲ್ಲದೆ ಒಂದು ವಿಚಾರದಲ್ಲಿ ಈ ಹಿಂದೆ ಭಾರತ ಟಿ20 ತಂಡವನ್ನು ಮುನ್ನಡೆಸಿದ್ದ ಎಲ್ಲಾ ನಾಯಕರನ್ನು ಹಿಂದಿಕ್ಕಿದ್ದಾರೆ.

14 ತಿಂಗಳ ಬಳಿಕ ಟಿ20ಯಲ್ಲಿ ಭಾರತದ ನಾಯಕತ್ವ ವಹಿಸಿಕೊಂಡಿರುವ ರೋಹಿತ್ ಶರ್ಮಾ ಇದೀಗ ಟಿ20ಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಅತ್ಯಂತ ಹಿರಿಯ ನಾಯಕ ಎನಿಸಿಕೊಂಡಿದ್ದಾರೆ. ರೋಹಿತ್ 36 ವರ್ಷ 256 ದಿನಗಳಲ್ಲಿ ಭಾರತ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ಇದರೊಂದಿಗೆ ಶಿಖರ್ ಧವನ್ ಅವರ ದಾಖಲೆಯನ್ನು ರೋಹಿತ್ ಮುರಿದಿದ್ದಾರೆ. ಇದಕ್ಕೂ ಮುನ್ನ ಶಿಖರ್ ಧವನ್ ಭಾರತ ಟಿ20 ತಂಡದ ಅತ್ಯಂತ ಹಿರಿಯ ನಾಯಕರಾಗಿದ್ದರು. ಅವರು 35 ವರ್ಷ 236 ದಿನಗಳಲ್ಲಿ ಭಾರತ ಟಿ20 ತಂಡವನ್ನು ನಾಯಕರಾಗಿ ಮುನ್ನಡೆಸಿದ್ದರು.

ಹಾಗೆಯೇ 35 ವರ್ಷ 52 ದಿನಗಳಲ್ಲಿ ಭಾರತ ಟಿ20 ತಂಡವನ್ನು ಮುನ್ನಡೆಸಿದ್ದ ಎಂಎಸ್ ಧೋನಿ, 33 ವರ್ಷ 3 ದಿನಗಳಲ್ಲಿ ಭಾರತ ಟಿ20 ತಂಡದ ನಾಯಕತ್ವವಹಿಸಿದ್ದ ವಿರಾಟ್ ಕೊಹ್ಲಿಯನ್ನು ಸಹ ಈ ವಿಚಾರದಲ್ಲಿ ಹಿಂದಿಕ್ಕಿದ್ದಾರೆ.

ಇದರೊಂದಿಗೆ ರೋಹಿತ್ ಶರ್ಮಾ ಭಾರತ ಪರ ಅತಿ ಹೆಚ್ಚು ಟಿ20 ಪಂದ್ಯಗಳನ್ನು ಆಡಿದ ಆಟಗಾರ ಎಂಬ ದಾಖಲೆಯನ್ನೂ ನಿರ್ಮಿಸಿದ್ದಾರೆ. ರೋಹಿತ್ ಇದುವರೆಗೆ ಭಾರತದ ಪರ 149ನೇ ಟಿ20 ಪಂದ್ಯ ಆಡುತ್ತಿದ್ದಾರೆ.

ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದು, ಅವರು 115 ಟಿ20 ಪಂದ್ಯಗಳನ್ನು ಆಡಿದ್ದಾರೆ. ಹಾಗೆಯೇ ಎಂಎಸ್ ಧೋನಿ 98 ಟಿ20 ಪಂದ್ಯಗಳನ್ನು ಆಡಿದ್ದರೆ, ಮತ್ತೊಂದೆಡೆ ಹಾರ್ದಿಕ್ ಪಾಂಡ್ಯ 92 ಟಿ20 ಪಂದ್ಯಗಳನ್ನು ಆಡಿದ್ದು, ಭುವನೇಶ್ವರ್ ಕುಮಾರ್ 87 ಟಿ20 ಪಂದ್ಯಗಳನ್ನು ಆಡಿದ್ದಾರೆ.