ಇಂದೋರ್ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರಂಭವಾಗಿರುವ ಬಾರ್ಡರ್- ಗವಾಸ್ಕರ್ ಟ್ರೋಫಿಯ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ತೃತೀಯ ಟೆಸ್ಟ್ ಪಂದ್ಯ ಕುತೂಹಲ ಕೆರಳಿಸಿದೆ. ಈ ಪಂದ್ಯದಲ್ಲೂ ಸ್ಪಿನ್ನರ್ಗಳೇ ಮೇಲುಗೈ ಸಾಧಿಸುತ್ತಿದ್ದು ಮೊದಲ ದಿನವೇ 14 ವಿಕೆಟ್ಗಳು ಉರುಳಿದವು.
ಟೀಮ್ ಇಂಡಿಯಾ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಕೇವಲ 109 ರನ್ಗೆ ಸರ್ವಪತನ ಕಂಡಿತು. ಮ್ಯಾಥ್ಯೂ ಕುಹ್ನೆಮನ್ ಹಾಗೂ ನೇಥನ್ ಲಿಯಾನ್ ಸ್ಪಿನ್ ದಾಳಿಗೆ ಭಾರತೀಯ ಬ್ಯಾಟರ್ಗಳು ತತ್ತರಿಸಿದರು. ತಂಡದಿಂದ ಕೆಎಲ್ ರಾಹುಲ್ ಕೈಬಿಟ್ಟು ಶುಭ್ಮನ್ ಗಿಲ್ ಅವರನ್ನು ಸೇರಿಸಿಕೊಂಡಿದ್ದು ಪ್ರಯೋಜನಕ್ಕೆ ಬರಲಿಲ್ಲ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ್ದ ರೋಹಿತ್ ಶರ್ಮಾ ಅವರ ನಿರ್ಧಾರ ಬುಡಮೇಲಾಯಿತು. 50 ರನ್ಗು ಮೊದಲೇ 5 ವಿಕೆಟ್ಗಳು ಪತನಗೊಂಡವು. ಮೊದಲ ಓವರ್ನಲ್ಲಿ ಜೀವದಾನ ಪಡೆದರೂ ರೋಹಿತ್ ಆಟ 23 ಎಸೆತಗಳಲ್ಲಿ 12 ರನ್ಗೆ ಅಂತ್ಯವಾಯಿತು.
ಇವರ ಬೆನ್ನಲ್ಲೇ ಶುಭಮನ್ ಗಿಲ್ ಕೂಡ ಪೆವಿಲಿಯನ್ ಸೇರಿದರು. ಕೆ.ಎಲ್ ರಾಹುಲ್ ಸ್ಥಾನದಲ್ಲಿ ಆಡುವ ಅವಕಾಶ ಪಡೆದ ಗಿಲ್, 18 ಎಸೆತಗಳಲ್ಲಿ 3 ಫೋರ್‌ಗಳೊಂದಿಗೆ 23 ರನ್ ಬಾರಿಸಿದರು.
ಚೇತೇಶ್ವರ್ ಪೂಜಾರ ಆಟ 1 ರನ್ಗೆ ಅಂತ್ಯವಾಯಿತು. ಟೀಮ್ ಇಂಡಿಯ ಪರ ವಿರಾಟ್ ಕೊಹ್ಲಿ 22 ರನ್ ಗಳಿಸುವ ಮೂಲಕ ಗರಿಷ್ಠ ರನ್ ಸ್ಕೋರರ್ ಎನಿಸಿದರು. ರವೀಂದ್ರ ಜಡೇಜಾ 4 ರನ್ಗೆ ಸುಸ್ತಾದರೆ, ಶ್ರೇಯಸ್ ಅಯ್ಯರ್ ಸೊನ್ನೆ ಸುತ್ತಿದರು. ಇನ್ ಫಾರ್ಮ್ ಬ್ಯಾಟರ್ ಅಕ್ಷರ್ ಪಟೇಲ್ 12 ರನ್ ಗಳಿಸಿ ಔಟಾಗದೇ ಉಳಿದರು.
ಭಾರತ ಪರ ಇನಿಂಗ್ಸ್ ಕೊನೆಯಲ್ಲಿ ಉಮೇಶ್ ಯಾದವ್ 13 ಎಸೆತಗಳಲ್ಲಿ 17 ರನ್ ಬಾರಿಸಿದ ಫಲವಾಗಿ ತಂಡದ ಮೊತ್ತ 100ರ ಗಡಿ ದಾಟಲು ಸಾಧ್ಯವಾಯಿತು. ಟೀಮ್ ಇಂಡಿಯಾ 33.2 ಓವರ್ಗಳಲ್ಲಿ 109 ರನ್ಗೆ ಆಲೌಟ್ ಆಯಿತು.
ಮ್ಯಾಥ್ಯೂ ಕುಹ್ನೆಮನ್ 16 ರನ್ ಬಿಟ್ಟುಕೊಟ್ಟು ಭಾರತದ 5 ವಿಕೆಟ್ಗಳನ್ನು ಕಬಳಿಸಿದರು. ನೇಥನ್ ಲಿಯಾನ್ 3 ವಿಕೆಟ್ ಪಡೆದರು.
ನಂತರ ತನ್ನ ಮೊದಲ ಇನ್ನಿಂಗ್ಸ್ ಶುರು ಮಾಡಿದ ಆಸೀಸ್ 2ನೇ ಓವರ್ನಲ್ಲಿ ವಿಕೆಟ್ ಕಳೆದುಕೊಂಡಿದ್ದು ಬಿಟ್ಟರೆ ನಂತರ ಉತ್ತಮ ಜೊತೆಯಾಟ ಆಡಿತು. ಎರಡನೇ ಓವರ್ ಮಾಡಿದ ಜಡೇಜಾ, ಟ್ರಾವಿಸ್ ಹೆಡ್ (9) ಅವರ ವಿಕೆಟ್ ತೆಗೆದರು.
ನಂತರ ಬಂದ ಮಾರ್ನಸ್ ಲಬುಶೇನ್ ಮತ್ತು ಉಸ್ಮಾನ್ ಖವಾಜಾ 100 ರನ್ಗಳ ಜೊತೆಯಾಟವಾಡಿದರು. ಇದರಿಂದ ಭಾರತದ ಮೊದಲ ಇನ್ನಿಂಗ್ಸ್ನ ಸನಿಹಕ್ಕೆ ಕಾಂಗರೂ ಪಡೆ ಸುಲಭವಾಗಿ ತಲುಪಿತು. 34 ರನ್ ಗಳಿಸಿದ್ದ ಲಬುಶೇನ್ ಜಡೇಜಾ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು.
ನಾಯಕ ಸ್ಟೀವ್ ಸ್ಮಿತ್ - ಖವಾಜಾ ಜೊತೆಯಾಟ ಹೆಚ್ಚು ಸಮಯ ಇರಲಿಲ್ಲ. ಅರ್ಧಶತಕ ಗಳಿಸಿ ಮುನ್ನುಗ್ಗುತ್ತಿದ್ದ ಖವಾಜಾ (60) ಅವರ ವಿಕೆಟನ್ನು ಜಡೇಜಾ ಕಬಳಿಸಿದರು. 26 ರನ್ ಗಳಿಸಿದ್ದ ಸ್ಮಿತ್ ಅವರನ್ನು ಕೂಡ ಜಡೇಜಾ ಪೆವಿಲಿಯನ್ಗೆ ಅಟ್ಟಿದರು. ದಿನದಾಟದ ಅಂತ್ಯಕ್ಕೆ ಆಸೀಸ್ 4 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿದೆ. ಪೀಟರ್ ಹ್ಯಾಂಡ್ಸ್ಕಾಂಬ್ 7 ಹಾಗೂ ಕ್ಯಾಮ್ರೋನ್ ಗ್ರೀನ್ 6 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. 47 ರನ್ಗಳ ಮುನ್ನಡೆ ಪಡೆದುಕೊಂಡಿದ್ದಾರೆ.
Published On - 7:54 am, Thu, 2 March 23