
ನಾಗ್ಪುರದಲ್ಲಿ ನಡೆಯುತ್ತಿರುವ ಆಸೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಮೊದಲು ಬೌಲಿಂಗ್ನಲ್ಲಿ 5 ವಿಕೆಟ್ ಕಿತ್ತು ಮಿಂಚಿದ್ದ ಜಡೇಜಾ ಇದೀಗ ಬ್ಯಾಟಿಂಗ್ನಲ್ಲೂ ಅಜೇಯ ಅರ್ಧಶತಕ ಸಿಡಿಸಿದ್ದಾರೆ. ಈ ಮೂಲಕ ರವೀಂದ್ರ ಜಡೇಜಾ ಮತ್ತೊಂದು ದಾಖಲೆ ಕೂಡ ಬರೆದಿದ್ದಾರೆ.

ಇವತ್ತಿನ ಅರ್ಧಶತಕದೊಂದಿಗೆ ರವೀಂದ್ರ ಜಡೇಜಾ, ಭಾರತದ ಪರ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಅರ್ಧಶತಕ ಮತ್ತು ಐದು ವಿಕೆಟ್‌ಗಳನ್ನು ಗಳಿಸಿದ ಮೊದಲ ಆಟಗಾರನೆನಿಸಿಕೊಂಡಿದ್ದಾರೆ. ಜಡೇಜಾ ನಾಲ್ಕನೇ ಬಾರಿ ಈ ಸಾಧನೆ ಮಾಡಿದ್ದಾರೆ.

ಇದರೊಂದಿಗೆ ಜಡೇಜಾ, ಮಾಜಿ ನಾಯಕ ಹಾಗೂ ಅನುಭವಿ ಆಲ್ ರೌಂಡರ್ ಕಪಿಲ್ ದೇವ್ ಅವರ ದಾಖಲೆಯನ್ನು ಕೂಡ ಮುರಿದಿದ್ದಾರೆ. ಕಪಿಲ್ 4 ಬಾರಿ ಈ ಸಾಧನೆ ಮಾಡಿದ್ದು, ಈಗ ಜಡ್ಡು ಅವರನ್ನು ಹಿಂದಿಕ್ಕಿದ್ದಾರೆ.

ಆದರೆ ಜಡೇಜಾ ಅವರ ಈ ಅದ್ಭುತ ಪ್ರದರ್ಶನ ನೋಡಿದ ಆಸೀಸ್ ಮೀಡಿಯಾಗಳು ಅವರ ವಿರುದ್ಧ ಮೋಸದಾಟ ಷಡ್ಯಂತ್ರ ಮಾಡಲು ಯತ್ನಿಸಿದ್ದವು. ಮೊದಲ ದಿನದಾಟದಲ್ಲಿ ಜಡೇಜಾ ತಮ್ಮ ಬೆರಳಿಗೆ ಪೇನ್ ಕಿಲ್ಲರ್ ಕ್ರೀಮ್ ಹಚ್ಚಿಕೊಳ್ಳುತ್ತಿದ್ದ ವಿಡಿಯೋವೊಂದನ್ನು ಇಟ್ಟುಕೊಂಡು, ಆಸ್ಟ್ರೇಲಿಯಾ ಮಾಧ್ಯಮಗಳು ಜಡೇಜಾ ಬಾಲ್ ಟಂಪರಿಂಗ್ ಮಾಡಿದ್ದಾರೆ ಎಂಬ ಆರೋಪ ಹೊರಿಸಲು ಯತ್ನಿಸಿದ್ದವು. ಆದರೂ ಮ್ಯಾಚ್ ರೆಫರಿ ಜಡೇಜಾಗೆ ಕ್ಲೀನ್ ಚಿಟ್ ನೀಡಿದರು.

ಮೊದಲ ಇನಿಂಗ್ಸ್‌ನಲ್ಲಿ ರವೀಂದ್ರ ಜಡೇಜಾ 49 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಭಾರತದಲ್ಲಿ ಆಡಿದ 3 ಸತತ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.