ಮಹಿಳೆಯರ ಟಿ20 ವಿಶ್ವಕಪ್‌ನಲ್ಲಿ ಭಾರತದ ಪಯಣ ಭಾನುವಾರದಿಂದ ಆರಂಭವಾಗಲಿದೆ. ಪಾಕಿಸ್ತಾನದೊಂದಿಗೆ ಮೊದಲ ಪಂದ್ಯ ನಡೆಯಲಿದ್ದು, ಈ ಪಂದ್ಯಕ್ಕೂ ಮುನ್ನ ಭಾರತ ವನಿತಾ ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ. ಅಭ್ಯಾಸ ಪಂದ್ಯದ ವೇಳೆ ಬೆರಳಿನ ಗಾಯಕ್ಕೆ ತುತ್ತಾಗಿದ್ದ ಭಾರತದ ಉಪನಾಯಕಿ ಸ್ಮೃತಿ ಮಂಧಾನ ಅವರು ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎಂದು ವರದಿಯಾಗಿದೆ. ಅಲ್ಲದೆ ಭಾನುವಾರ ನಡೆಯಲ್ಲಿರುವ ಟಿ20 ಮಹಿಳಾ ವಿಶ್ವಕಪ್ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಆಡುವುದು ಅನುಮಾನ ಎಂದು ವರದಿಯಾಗಿದೆ.
ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಮಂಧಾನ ಗಾಯಗೊಂಡಿದ್ದರು. ಮಂಧಾನ ಗಾಯಗೊಂಡಿದ್ದ ಬಗ್ಗೆ ಐಸಿಸಿ ಮೂಲಗಳು ಮಾಹಿತಿ ನೀಡಿದ್ದವು. ಇದೀಗ ಅವರು ಇಡೀ ವಿಶ್ವಕಪ್‌ನಿಂದಲೇ ಹೊರಗುಳಿದಿದ್ದಾರೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಆದರೆ ಪಾಕಿಸ್ತಾನದ ವಿರುದ್ಧ ಸ್ಮೃತಿ ಆಡುತ್ತಿಲ್ಲ.
ಫೀಲ್ಡಿಂಗ್ ವೇಳೆ ಗಾಯಗೊಂಡಿದ್ದ ಮಂಧನಾ ಆಸ್ಟ್ರೇಲಿಯಾ ವಿರುದ್ಧ ಮೂರನೇ ಕ್ರಮಾಂಕಕ್ಕೆ ಬ್ಯಾಟಿಂಗ್ಗಿಳಿದು ಕೇವಲ ಮೂರು ಎಸೆತಗಳನ್ನು ಮಾತ್ರ ಆಡಿದ್ದರು. ಬಳಿಕ ಬಾಂಗ್ಲಾದೇಶದ ವಿರುದ್ಧದ ಎರಡನೇ ಅಭ್ಯಾಸ ಪಂದ್ಯದಲ್ಲೂ ಸ್ಮೃತಿ ಕಣಕ್ಕಿಳಿದಿರಲಿಲ್ಲ. ಒಂದು ವೇಳೆ ಮಂಧಾನ ಅವರ ಗಾಯ ಮತ್ತಷ್ಟು ಗಂಭೀರವಾದರೆ ಟೀಂ ಇಂಡಿಯಾಗೆ ದೊಡ್ಡ ಹೊಡೆತ ಬೀಳುವುದಂತೂ ಖಚಿತ.
ಅಂದಹಾಗೆ, ಕಳೆದ ವಾರ ದಕ್ಷಿಣ ಆಫ್ರಿಕಾ ವಿರುದ್ಧದ ತ್ರಿಕೋನ ಸರಣಿಯ ಫೈನಲ್‌ನಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಕೂಡ ಭುಜದ ಗಾಯಕ್ಕೆ ಒಳಗಾಗಿದ್ದರು. ಆದಾಗ್ಯೂ, ಅಂತಿಮ ಪಂದ್ಯದ ನಂತರ ಅವರು ವಿಶ್ರಾಂತಿಯೊಂದಿಗೆ ಚೇತರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವು ಪಾಕಿಸ್ತಾನ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್ ಜೊತೆಗೆ ಬಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ಕಳೆದ ಬಾರಿ ರನ್ನರ್ ಅಪ್ ಆಗಿದ್ದ ಭಾರತ, ಈ ಬಾರಿ ಪ್ರಶಸ್ತಿ ಗೆಲ್ಲುವ ಗುರಿಯೊಂದಿಗೆ ಕಣಕ್ಕಿಳಿಯಲಿದೆ.
Published On - 9:28 am, Sat, 11 February 23