
ಇಂದೋರ್ನಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ನಡುವಣ 3ನೇ ಟೆಸ್ಟ್ ಪಂದ್ಯದಲ್ಲಿ 1 ವಿಕೆಟ್ ಪಡೆಯುವ ಮೂಲಕ ಟೀಮ್ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಅದು ಮೂಲಕ ಲೆಜೆಂಡ್ ಆಲ್ರೌಂಡರ್ ಕಪಿಲ್ ದೇವ್ ಅವರ ದಾಖಲೆಯನ್ನು ಸರಿಗಟ್ಟುವ ಮೂಲಕ ಎಂಬುದು ವಿಶೇಷ.

ಹೋಲ್ಕರ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 109 ರನ್ಗಳಿಗೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಜಡೇಜಾ ಆರಂಭಿಕ ಆಘಾತ ನೀಡಿದ್ದರು. ಆರಂಭಿಕ ಆಟಗಾರ ಟ್ರಾವಿಡ್ ಹೆಡ್ (9) ರನ್ನು ಎಲ್ಬಿಡಬ್ಲ್ಯೂಗೆ ಕೆಡವಿದ ರವೀಂದ್ರ ಜಡೇಜಾ ಭಾರತ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು.

ಇದರೊಂದಿಗೆ ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ರವೀಂದ್ರ ಜಡೇಜಾ 500 ವಿಕೆಟ್ಗಳನ್ನು ಪೂರೈಸಿದರು. ಅಷ್ಟೇ ಅಲ್ಲದೆ ಭಾರತದ ಪರ 500 ವಿಕೆಟ್ ಹಾಗೂ 5 ಸಾವಿರ ರನ್ ಕಲೆಹಾಕಿದ 2ನೇ ಆಟಗಾರ ಎಂಬ ವಿಶೇಷ ದಾಖಲೆಯನ್ನು ರವೀಂದ್ರ ಜಡೇಜಾ ತಮ್ಮದಾಗಿಸಿಕೊಂಡರು.

ಇದಕ್ಕೂ ಮುನ್ನ ಕಪಿಲ್ ದೇವ್ ಟೀಮ್ ಇಂಡಿಯಾ ಪರ ಈ ಸಾಧನೆ ಮಾಡಿದ್ದರು. 373 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿರುವ ಕಪಿಲ್ ದೇವ್ 9517 ರನ್ ಕಲೆಹಾಕಿದ್ದಾರೆ. ಹಾಗೆಯೇ 687 ವಿಕೆಟ್ಗಳನ್ನು ಕಬಳಿಸಿದ್ದಾರೆ.

ಇದೀಗ ಟೀಮ್ ಇಂಡಿಯಾ ಪರ ಒಟ್ಟು 298 ಪಂದ್ಯಗಳನ್ನು (ಏಕದಿನ, ಟೆಸ್ಟ್, ಟಿ20) ಆಡಿರುವ ಜಡೇಜಾ 5527 ರನ್ ಕಲೆಹಾಕಿದ್ದಾರೆ. ಅಷ್ಟೇ ಅಲ್ಲದೆ 500* ವಿಕೆಟ್ ಕಬಳಿಸಿ ಕಪಿಲ್ ದೇವ್ ಹೆಸರಿನಲ್ಲಿದ್ದ 5000 ರನ್ ಹಾಗೂ 500 ವಿಕೆಟ್ ಪಡೆದ ವಿಶೇಷ ದಾಖಲೆಯನ್ನು ಸರಿಗಟ್ಟಿದ್ದಾರೆ.

ವಿಶೇಷ ಎಂದರೆ ಟೀಮ್ ಇಂಡಿಯಾ ಪರ ರವೀಂದ್ರ ಜಡೇಜಾ ಹಾಗೂ ಕಪಿಲ್ ದೇವ್ ಅವರನ್ನು ಹೊರತುಪಡಿಸಿ ಬೇರೆ ಯಾವುದೇ ಆಲ್ರೌಂಡರ್ಗಳು 5000 ರನ್ ಹಾಗೂ 500 ವಿಕೆಟ್ಗಳನ್ನು ಪಡೆದಿಲ್ಲ.