- Kannada News Photo gallery Cricket photos IND vs AUS 3rd Test: Virat Kohli joins Sachin and Dhoni in elite list
Virat Kohli: ಸಚಿನ್, ಧೋನಿ ಬಳಿಕ ವಿಶೇಷ ದಾಖಲೆ ಬರೆದ ಕಿಂಗ್ ಕೊಹ್ಲಿ
India vs Australia 3rd Test: 493 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ ಮುಂಬರುವ ಏಷ್ಯಾಕಪ್ ವೇಳೆ 500 ಇಂಟರ್ನ್ಯಾಷನಲ್ ಮ್ಯಾಚ್ಗಳನ್ನು ಆಡಿದ ವಿಶೇಷ ಸಾಧಕರ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ.
Updated on: Mar 01, 2023 | 9:23 PM

ಭಾರತ-ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ಪಂದ್ಯವು ಇಂದೋರ್ನಲ್ಲಿ ನಡೆಯುತ್ತಿದೆ. ಹೋಲ್ಕರ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ವಿಶೇಷ ದಾಖಲೆಯನ್ನು ತಮ್ಮದಾಗಿಸಿಕೊಂಡರು.

ಇಂದೋರ್ ಮೈದಾನದಲ್ಲಿ ತಮ್ಮ ಕೆರಿಯರ್ನ 493ನೇ ಅಂತಾರಾಷ್ಟ್ರೀಯ ಪಂದ್ಯವಾಡಿದ ಕೊಹ್ಲಿ ಭಾರತದಲ್ಲೇ 200 ಪಂದ್ಯಗಳನ್ನಾಡಿದ ವಿಶೇಷ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ನ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಾಗೂ ಮಹೇಂದ್ರ ಸಿಂಗ್ ಧೋನಿ ಮಾತ್ರ ಈ ದಾಖಲೆ ಬರೆದಿದ್ದರು.

ಒಟ್ಟು 664 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಸಚಿನ್ ತೆಂಡೂಲ್ಕರ್ ಭಾರತದಲ್ಲಿ 258 ಮ್ಯಾಚ್ಗಳನ್ನು ಆಡಿದ್ದರು. ಈ ಮೂಲಕ ತವರಿನಲ್ಲಿ ಟೀಮ್ ಇಂಡಿಯಾ ಪರ ಅತ್ಯಧಿಕ ಮ್ಯಾಚ್ ಆಡಿದ ವಿಶೇಷ ದಾಖಲೆಯನ್ನು ಸಚಿನ್ ನಿರ್ಮಿಸಿದ್ದಾರೆ.

ಧೋನಿ 538 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, ಇದರಲ್ಲಿ 205 ಪಂದ್ಯಗಳನ್ನು ಭಾರತದಲ್ಲಿ ಆಡಿದ್ದರು. ಈ ಮೂಲಕ ತವರಿನಲ್ಲಿ ಅತೀ ಹೆಚ್ಚು ಪಂದ್ಯವಾಡಿದ 2ನೇ ಆಟಗಾರ ಎಂಬ ದಾಖಲೆಯನ್ನು ಹೊಂದಿದ್ದಾರೆ.

ಇದೀಗ ಈ ಇಬ್ಬರು ಸಾಧಕರ ಪಟ್ಟಿಗೆ ವಿರಾಟ್ ಕೊಹ್ಲಿ ಕೂಡ ಸೇರ್ಪಡೆಯಾಗಿದ್ದಾರೆ. ಟೀಮ್ ಇಂಡಿಯಾ ಪರ 493 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಕಿಂಗ್ ಕೊಹ್ಲಿ ಇದೀಗ ಭಾರತದಲ್ಲಿ 200 ಪಂದ್ಯವಾಡಿದ ವಿಶೇಷ ಸಾಧನೆ ಮಾಡಿದ್ದಾರೆ. ಈ ಮೂಲಕ ತವರಿನಲ್ಲಿ 200 ಪಂದ್ಯಗಳನ್ನಾಡಿದ ಮೂರನೇ ಭಾರತೀಯ ಎನಿಸಿಕೊಂಡಿದ್ದಾರೆ.

ಸದ್ಯ 493 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ ಮುಂಬರುವ ಏಷ್ಯಾಕಪ್ ವೇಳೆ 500 ಇಂಟರ್ನ್ಯಾಷನಲ್ ಮ್ಯಾಚ್ಗಳನ್ನು ಆಡಿದ ವಿಶೇಷ ಸಾಧಕರ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ.
