
ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಭರ್ಜರಿ ಅಭ್ಯಾಸದಲ್ಲಿ ತೊಡಗಿಸಿಕೊಂಡಿದೆ. ಈ ಅಭ್ಯಾಸ ನಡುವೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಗಾಯಗೊಂಡಿದ್ದರು. ಭಾನುವಾರ ಮೆಲ್ಬೋರ್ನ್ ಮೈದಾನದಲ್ಲಿ ನಡೆದ ಅಭ್ಯಾಸದ ವೇಳೆ ಗಾಯಗೊಂಡಿದ್ದ ಹಿಟ್ಮ್ಯಾನ್ ಅರ್ಧದಲ್ಲೇ ಪ್ರಾಕ್ಟೀಸ್ ನಿಲ್ಲಿಸಿದ್ದರು.

ನೆಟ್ಸ್ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದಾಗ ಥ್ರೋಡೌನ್ ಸ್ಪೆಷಲಿಸ್ಟ್ ದಯಾನಂದ ಎಸೆದ ಚೆಂಡು ರೋಹಿತ್ ಶರ್ಮಾ ಅವರ ಎಡ ಮೊಣಕಾಲಿಗೆ ಬಡಿದಿತ್ತು. ಇದರಿಂದ ನೋವಿಗೆ ಒಳಗಾದ ರೋಹಿತ್ ಶರ್ಮಾ ತಕ್ಷಣವೇ ಅಭ್ಯಾಸವನ್ನು ನಿಲ್ಲಿಸಿದ್ದರು. ಅಲ್ಲದೆ ಆ ಬಳಿಕ ಅವರು ಬ್ಯಾಟಿಂಗ್ ಪ್ರಾಕ್ಟೀಸ್ ನಡೆಸಿರಲಿಲ್ಲ.

ಇದಾದ ಬಳಿಕ ಅಭ್ಯಾಸದ ವೇಳೆ ಕಾಣಿಸಿಕೊಳ್ಳದ ಕಾರಣ ರೋಹಿತ್ ಶರ್ಮಾ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆಯಿದೆ ಎಂದು ವರದಿಯಾಗಿತ್ತು. ಇದೀಗ ಟೀಮ್ ಇಂಡಿಯಾ ನಾಯಕನ ಗಾಯದ ಕುರಿತಾದ ಬಿಗ್ ಅಪ್ಡೇಟ್ವೊಂದು ಹೊರಬಿದ್ದಿದೆ.

ತಮ್ಮ ಗಾಯದ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿರುವ ರೋಹಿತ್ ಶರ್ಮಾ, ಅಭ್ಯಾಸದ ವೇಳೆ ಮೊಣಕಾಲಿಗೆ ಗಾಯವಾಗಿತ್ತು. ಇದೀಗ ನೋವು ಸಂಪೂರ್ಣ ಮಾಯವಾಗಿದೆ. ಹೀಗಾಗಿ ನಾಲ್ಕನೇ ಟೆಸ್ಟ್ ಪಂದ್ಯವಾಡಲು ನಾನು ಫಿಟ್ ಆಗಿದ್ದೇನೆ ಎಂದು ತಿಳಿಸಿದ್ದಾರೆ. ಈ ಮೂಲಕ ಮೆಲ್ಬೋರ್ನ್ ಟೆಸ್ಟ್ನಲ್ಲಿ ಕಣಕ್ಕಿಳಿಯುವುದನ್ನು ಖುದ್ದು ರೋಹಿತ್ ಶರ್ಮಾ ಖಚಿತಪಡಿಸಿದ್ದಾರೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವು ಡಿಸೆಂಬರ್ 26 ರಿಂದ ಶುರುವಾಗಲಿದೆ. ಮೆಲ್ಬೋರ್ನ್ನ ಎಂಸಿಜಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಉಭಯ ತಂಡಗಳ ಪಾಲಿಗೆ ತುಂಬಾ ನಿರ್ಣಾಯಕ. ಏಕೆಂದರೆ ಈ ಮ್ಯಾಚ್ನಲ್ಲಿ ಗೆಲ್ಲುವ ತಂಡ ಸರಣಿಯಲ್ಲಿ ಮುನ್ನಡೆ ಸಾಧಿಸುವುದಲ್ಲದೆ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಹಾದಿಯನ್ನು ಸುಗಮಗೊಳಿಸಲಿದೆ.

ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್, ಶುಭ್ಮನ್ ಗಿಲ್ , ವಿರಾಟ್ ಕೊಹ್ಲಿ , ಕೆಎಲ್ ರಾಹುಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಸರ್ಫರಾಝ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ , ಮೊಹಮ್ಮದ್ ಸಿರಾಜ್ , ಆಕಾಶ್ ದೀಪ್, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ದೇವದತ್ ಪಡಿಕ್ಕಲ್, ತನುಷ್ ಕೋಟ್ಯಾನ್.