
ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ತಮ್ಮ ವೃತ್ತಿ ಜೀವನದಲ್ಲಿ ಒಂದರ ಹಿಂದೆ ಒಂದರಂತೆ ಹಲವು ಮೈಲುಗಲ್ಲುಗಳನ್ನು ದಾಟುತ್ತಿದ್ದಾರೆ. ಇದೀಗ ಇಂದು ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಸೂಪರ್ 8 ಪಂದ್ಯದಲ್ಲೂ ವಿಶೇಷ ಮೈಲಿಗಲ್ಲಿಗೆ ತನ್ನ ಹೆಸರನ್ನು ನಮೂದಿಸಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ವಿರಾಟ್ ಕೊಹ್ಲಿ ತಮ್ಮ ಇನ್ನಿಂಗ್ಸ್ನಲ್ಲಿ 28 ಎಸೆತಗಳನ್ನು ಎದುರಿಸಿ 1 ಬೌಂಡರಿ ಮತ್ತು 3 ಸಿಕ್ಸರ್‌ಗಳ ನೆರವಿನಿಂದ 37 ರನ್ ಬಾರಿಸಿದರು. ಈ ಇನ್ನಿಂಗ್ಸ್‌ನ ಸಹಾಯದಿಂದ ವಿರಾಟ್ ಕೊಹ್ಲಿ ತಮ್ಮ ಹೆಸರಿನಲ್ಲಿ ದೊಡ್ಡ ದಾಖಲೆಯನ್ನು ಬರೆದರು.

ಬಾಂಗ್ಲಾದೇಶ ವಿರುದ್ಧ ಸಿಡಿಸಿದ 37 ರನ್‌ಗಳ ನೆರವಿನಿಂದ ಇದೀಗ ವಿರಾಟ್ ಕೊಹ್ಲಿ ಟಿ20 ಮತ್ತು ಏಕದಿನ ವಿಶ್ವಕಪ್‌ನಲ್ಲಿ 3000 ರನ್‌ಗಳ ಗಡಿ ದಾಟಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಐತಿಹಾಸಿಕ ದಾಖಲೆಯನ್ನು ಮುಟ್ಟಲು ಕೊಹ್ಲಿಗೆ 35 ರನ್‌ಗಳ ಅಗತ್ಯವಿತ್ತು. ಇಂದಿನ ಪಂದ್ಯದಲ್ಲಿ 37 ರನ್ ಬಾರಿಸಿದ ತಕ್ಷಣ ಕೊಹ್ಲಿ ಇತಿಹಾಸ ನಿರ್ಮಿಸಿದರು.

ಈ ವಿಷಯದಲ್ಲಿ ಕೊಹ್ಲಿ ನಂತರ ರೋಹಿತ್ ಶರ್ಮಾ ಹೆಸರು ಎರಡನೇ ಸ್ಥಾನದಲ್ಲಿದೆ. ರೋಹಿತ್ ಎರಡು ಮಾದರಿಯ ವಿಶ್ವಕಪ್‌ಗಳಲ್ಲಿ ಇದುವರೆಗೆ 2637 ರನ್ ಬಾರಿಸಿದ್ದಾರೆ.

ಮೂರನೇ ಸ್ಥಾನದಲ್ಲಿರುವ ಆಸ್ಟ್ರೇಲಿಯದ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಇದುವರೆಗೆ 2502 ರನ್ ಬಾರಿಸಿದ್ದರೆ, ಈ ಪಟ್ಟಿಯಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ತೆಂಡೂಲ್ಕರ್ 2278 ರನ್ ಬಾರಿಸಿದ್ದು, ಶ್ರೀಲಂಕಾದ ದಿಗ್ಗಜ ಕುಮಾರ ಸಂಗಕ್ಕಾರ 2193 ರನ್ ಬಾರಿಸಿ ಐದನೇ ಸ್ಥಾನದಲ್ಲಿದ್ದಾರೆ.

ಈ ದಾಖಲೆಯಲ್ಲದೆ ಕೊಹ್ಲಿ, ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಇದುವರೆಗೆ ಕೊಹ್ಲಿ ಆಡಿರುವ 32 ಪಂದ್ಯಗಳ 30 ಇನ್ನಿಂಗ್ಸ್‌ಗಳಲ್ಲಿ 1207 ರನ್ ಬಾರಿಸಿದ್ದಾರೆ. ಇದರಲ್ಲಿ 14 ಅರ್ಧಶತಕಗಳು ಸೇರಿವೆ.

ಏಕದಿನ ವಿಶ್ವಕಪ್‌ನಲ್ಲೂ ವಿರಾಟ್ ತಮ್ಮ ಬ್ಯಾಟ್‌ನಿಂದ ಸಾಕಷ್ಟು ರನ್ ಗಳಿಸಿದ್ದಾರೆ. ಕೊಹ್ಲಿ ಆಡಿರುವ 37 ಪಂದ್ಯಗಳಲ್ಲಿ 1795 ರನ್ ಬಾರಿಸಿದ್ದಾರೆ. ಇದರಲ್ಲಿ 5 ಶತಕ ಮತ್ತು 12 ಅರ್ಧ ಶತಕ ಸೇರಿವೆ.