
ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್‌ನ ಮೊದಲ ಎರಡು ದಿನಗಳ ಆಟದಲ್ಲಿ ಭಾರತ ಸಂಪೂರ್ಣ ಮೇಲುಗೈ ಸಾಧಿಸಿತು. ಬ್ಯಾಟಿಂಗ್ನಲ್ಲಿ ದಿಢೀರ್ ಕುಸಿತ ಕಂಡರೂ ಉತ್ತಮ ಮುನ್ನಡೆ ಪಡೆದುಕೊಂಡಿದೆ. ಇಂಗ್ಲೆಂಡ್ ಅನ್ನು 218 ರನ್ಗಳಿಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಆಡುತ್ತಿರುವ ಭಾರತ 2ನೇ ದಿನದಾಟದ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 473 ರನ್ ಗಳಿಸಿದೆ.

ರೋಹಿತ್ ಶರ್ಮಾ-ಶುಭ್ಮನ್ ಗಿಲ್ ಶತಕ, ದೇವದತ್ ಪಡಿಕ್ಕಲ್-ಸರ್ಫರಾಜ್ ಖಾನ್ ಅರ್ಧಶತಕದ ನೆರವಿನಿಂದ ಟೀಮ್ ಇಂಡಿಯಾ 255 ರನ್ಗಳ ಮುನ್ನಡೆ ಸಾಧಿಸಿದೆ. ಜಸ್ಪ್ರಿತ್ ಬುಮ್ರಾ ಹಾಗೂ ಕುಲ್ದೀಪ್ ಯಾದವ್ ಕ್ರೀಸ್ನಲ್ಲಿದ್ದು, ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. 300 ರನ್ಗಳ ಮುನ್ನಡೆ ಸಾಧಿಸುವತ್ತ ಚಿತ್ತ ನೆಟ್ಟಿದೆ.

ಮೊದಲ ದಿನದಾಟದಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 135 ರನ್ ಕಲೆಹಾಕಿದ್ದ ಭಾರತ ಇಲ್ಲಿಂದ ಎರಡನೇ ದಿನದಾಟವನ್ನು ಆರಂಭಿಸಿತು. ರೋಹಿತ್ ಹಾಗೂ ಶುಭ್ಮನ್ ಗಿಲ್ ಇಬ್ಬರೂ ಶತಕ ಸಿಡಿಸುವುದರೊಂದಿಗೆ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು. ರೋಹಿತ್ 162 ಎಸೆತಗಳಲ್ಲಿ 103 ರನ್ ಹಾಗೂ ಗಿಲ್ 150 ಎಸೆತಗಳಲ್ಲಿ 110 ರನ್ ಕಲೆಹಾಕಿದರು.

ಇವರ ನಿರ್ಗಮನದ ಬಳಿಕ ತಂಡದ ಇನ್ನಿಂಗ್ಸ್ ಜವಾಬ್ದಾರಿ ಹೊತ್ತ ಯುವ ಬ್ಯಾಟರ್ಗಳಾದ ಸರ್ಫರಾಜ್ ಖಾನ್ ಹಾಗೂ ದೇವದತ್ ಪಡಿಕ್ಕಲ್ ತಲಾ ಅರ್ಧಶತಕ ಸಿಡಿಸುವುದರೊಂದಿಗೆ ತಂಡವನ್ನು 400 ರನ್ಗಳ ಗಡಿ ದಾಟಿಸಿದರು. ಸರ್ಫರಾಜ್ 60 ಎಸೆತಗಳಲ್ಲಿ 56 ಸಿಡಿಸಿ ವಿಕೆಟ್ ಒಪ್ಪಿಸಿದರೆ, ಪಡಿಕ್ಕಲ್ 103 ಎಸೆತಗಳಲ್ಲಿ 65 ರನ್ ಕಲೆಹಾಕಿ ಪೆವಿಲಿಯನ್ ಸೇರಿಕೊಂಡರು.

ರವೀಂದ್ರ ಜಡೇಜಾ 15 ರನ್ಗಳಿಗೆ ಸುಸ್ತಾದರೆ, ದ್ರುವ್ ಜುರೇಲ್ ಆಟವೂ 15 ರನ್ಗಳಿಗೆ ಅಂತ್ಯಗೊಂಡಿತು. ನೂರನೇ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ಅಶ್ವಿನ್ ಖಾತೆ ತೆರೆಯದೆ ನಿರ್ಗಮಿಸಿದರೆ, ದಿನದಂತ್ಯದವರೆಗೂ ಆಂಗ್ಲರ ಬೌಲಿಂಗ್ಗೆ ತಕ್ಕ ಉತ್ತರ ನೀಡಿದ ಕುಲ್ದೀಪ್ ಯಾದವ್ 27 ರನ್ ಹಾಗೂ ಜಸ್ಪ್ರೀತ್ ಬುಮ್ರಾ 19 ರನ್ ಸಿಡಿಸಿ ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಇಂಗ್ಲೆಂಡ್ ಪರ ಬೌಲಿಂಗ್ನಲ್ಲಿ ಮಿಂಚಿದ ಶೊಯೇಬ್ ಬಶೀರ್ ಪ್ರಮುಖ 4 ವಿಕೆಟ್ ಪಡೆದರೆ, ಮತ್ತೊಬ್ಬ ಸ್ಪಿನ್ನರ್ ಟಾಮ್ ಹಾರ್ಟ್ಲಿ 2 ವಿಕೆಟ್, ಬೆನ್ ಸ್ಟೋಕ್ಸ್ ಹಾಗೂ ಜೇಮ್ಸ್ ಆಂಡರ್ಸನ್ ತಲಾ 1 ವಿಕೆಟ್ ಪಡೆದರು. ಇಂದಿನ ಮೂರನೇ ದಿನದಾಟ ರೋಚಕತೆ ಸೃಷ್ಟಿಸಿದ್ದು, ಭಾರತವನ್ನು ಬೇಗ ಆಲೌಟ್ ಮಾಡಿದರೂ ಇಂಗ್ಲೆಂಡ್ಗೆ ಈ ಟೆಸ್ಟ್ ಕಬ್ಬಿಣದ ಕಡಲೆಯಂತಾಗಿದೆ.