- Kannada News Photo gallery Cricket photos IPL 2024 AB de Villiers drops major hint of coaching RCB in 17th edition of IPL
IPL 2024: ಆರ್‌ಸಿಬಿ ಅಭಿಮಾನಿಗಳಿಗೆ ಸಿಹಿಸುದ್ದಿ; ಕಂಬ್ಯಾಕ್ ಸುಳಿವು ನೀಡಿದ ಡಿವಿಲಿಯರ್ಸ್..!
IPL 2024: ವಾಸ್ತವವಾಗಿ 2021 ರ ನವೆಂಬರ್ನಲ್ಲಿ ಐಪಿಎಲ್‌ಗೆ ವಿದಾಯ ಹೇಳಿದ ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟರ್ ಹಾಗೂ ಆರ್‌ಸಿಬಿ ಆಪತ್ಬಾಂಧವ ಖ್ಯಾತಿಯ ಎಬಿ ಡಿವಿಲಿಯರ್ಸ್ ಅಂದಿನಿಂದ ಯಾವುದೇ ಲೀಗ್ಗಳಲ್ಲಿ ಕಾಣಿಸಿಕೊಂಡಿಲ್ಲ. ಆದರೀಗ ಮಿ. 360 ಮತ್ತೆ ಐಪಿಎಲ್ ಅಖಾಡದಲ್ಲಿ ಕಾಣಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ.
Updated on: Mar 08, 2024 | 6:48 PM

17ನೇ ಆವೃತ್ತಿಯ ಐಪಿಎಲ್‌ಗೆ ವೇದಿಕೆ ಸಜ್ಜಾಗಿದೆ. ಇದೇ ಮಾರ್ಚ್ 22 ರಿಂದ ಲೀಗ್ಗೆ ಚಾಲನೆ ಸಿಗುತ್ತಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿವೆ. ಆದರೆ ಅದಕ್ಕೂ ಮುನ್ನ ಆರ್‌ಸಿಬಿ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದು ಸಿಕ್ಕಿದೆ.

ವಾಸ್ತವವಾಗಿ 2021 ರ ನವೆಂಬರ್ನಲ್ಲಿ ಐಪಿಎಲ್‌ಗೆ ವಿದಾಯ ಹೇಳಿದ ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟರ್ ಹಾಗೂ ಆರ್‌ಸಿಬಿ ಆಪತ್ಬಾಂಧವ ಖ್ಯಾತಿಯ ಎಬಿ ಡಿವಿಲಿಯರ್ಸ್ ಅಂದಿನಿಂದ ಯಾವುದೇ ಲೀಗ್ಗಳಲ್ಲಿ ಕಾಣಿಸಿಕೊಂಡಿಲ್ಲ. ಆದರೀಗ ಮಿ. 360 ಮತ್ತೆ ಐಪಿಎಲ್ ಅಖಾಡದಲ್ಲಿ ಕಾಣಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ.

2011 ರಿಂದ ಆರ್‌ಸಿಬಿ ಪರ ಆಡಿದ್ದ ಡಿವಿಲಿಯರ್ಸ್ ಅನೇಕ ಪಂದ್ಯವನ್ನು ಏಕಾಂಗಿಯಾಗಿ ಗೆಲ್ಲಿಸಿಕೊಟ್ಟಿದ್ದರು. ಆದರೆ ತಂಡವು ಒಮ್ಮೆಯೂ ಪ್ರಶಸ್ತಿ ಗೆದ್ದಿರಲಿಲ್ಲ. ಆಟಗಾರನಾಗಿ ಕಪ್ ಗೆಲ್ಲುವಲ್ಲಿ ವಿಫಲರಾಗಿದ್ದ ಡಿವಿಲಿಯರ್ಸ್ ಇದೀಗ ತಂಡಕ್ಕೆ ಮಾರ್ಗದರ್ಶನ ನೀಡುವ ಮೂಲಕ ತಂಡವನ್ನು ಚಾಂಪಿಯನ್ ಮಾಡುವ ಇರಾದೆಯನ್ನು ವ್ಯಕ್ತಪಡಿಸಿದ್ದಾರೆ.

ಡಿವಿಲಿಯರ್ಸ್ ಐಪಿಎಲ್‌ಗೆ ವಿದಾಯ ಹೇಳಿದ ಬಳಿಕ ತಂಡಕ್ಕೆ ಎಬಿ ಸಲ್ಲಿಸಿದ ಸೇವೆಯ ಗೌರವಾರ್ಥವಾಗಿ ಆರ್‌ಸಿಬಿ ಕಳೆದ ವರ್ಷ ತನ್ನ ಹಾಲ್ ಆಫ್ ಫೇಮ್‌ನಲ್ಲಿ ಡಿವಿಲಿಯರ್ಸ್‌ನನ್ನು ಸೇರಿಸಿಕೊಂಡಿತ್ತು. ಕಳೆದ ವರ್ಷ ಐಪಿಎಲ್‌ನಲ್ಲೂ ಡಿವಿಲಿಯರ್ಸ್ ಕಾಮೆಂಟರಿ ಮಾಡಿದ್ದರು. ಈ ಬಾರಿಯೂ ಅವರು ಈ ಹುದ್ದೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಆದರೆ ಅದಕ್ಕೂ ಮುನ್ನ ಆರ್‌ಸಿಬಿ ತಂಡವನ್ನು ಮತ್ತೆ ಸೇರುವ ಇಂಗಿತ ವ್ಯಕ್ತಪಡಿಸಿರುವ ಡಿವಿಲಿಯರ್ಸ್ ಆರ್‌ಸಿಬಿಯಿಂದ ಪ್ರಸ್ತಾವನೆ ಬಂದರೆ ಕೋಚಿಂಗ್ ನಿರಾಕರಿಸುವುದಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ಎಬಿ, ವಿರಾಟ್ ಕೊಹ್ಲಿ ನನ್ನನ್ನು ಆರ್‌ಸಿಬಿಗೆ ಮರಳಿ ಕರೆತರುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ ಆದರೆ ಇದುವರೆಗೆ ಫ್ರಾಂಚೈಸಿಯಿಂದ ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದು ಅವರು ಹೇಳಿದ್ದಾರೆ.

ಈ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಡಿವಿಲಿಯರ್ಸ್, ತನ್ನೊಂದಿಗೆ ಮತ್ತು ಇತರ ಕೆಲವು ಬ್ಯಾಟ್ಸ್‌ಮನ್‌ಗಳೊಂದಿಗೆ ಸ್ವಲ್ಪ ಸಮಯ ಕಳೆಯಬೇಕೆಂದು ವಿರಾಟ್ ಸೂಚಿಸಿದ್ದಾರೆ. ಆದರೆ ಇದಕ್ಕಾಗಿ ನಾಯಕ ಫಾಫ್ ಡು ಪ್ಲೆಸಿಸ್ ಅಥವಾ ಕೋಚ್ ಆಂಡಿ ಫ್ಲವರ್ ಅವರಿಂದ ಪ್ರಸ್ತಾವನೆ ಬರಬೇಕು. ಸದ್ಯಕ್ಕೆ ನಾನು ಐಪಿಎಲ್‌ನಲ್ಲಿ ಕಾಮೆಂಟರಿ ಮಾತ್ರ ಮಾಡಲಿದ್ದೇನೆ ಎಂದಿದ್ದಾರೆ.

ಐಪಿಎಲ್‌ನಲ್ಲಿ 184 ಪಂದ್ಯಗಳನ್ನು ಆಡಿರುವ ಡಿವಿಲಿಯರ್ಸ್, 39.71 ಸರಾಸರಿಯಲ್ಲಿ 3403 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು ಮೂರು ಶತಕಗಳು ಮತ್ತು 40 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಐಪಿಎಲ್ ಬಂದಾಗಲೆಲ್ಲಾ ಡಿವಿಲಿಯರ್ಸ್ ಐಪಿಎಲ್‌ಗೆ ಮರಳುವ ಬಗ್ಗೆ ಒಂದಷ್ಟು ಸುದ್ದಿಗಳು ಬರುತ್ತಲೇ ಇರುತ್ತವೆ.

ಡಿವಿಲಿಯರ್ಸ್ ಅವರನ್ನು ಆರ್‌ಸಿಬಿಗೆ ಕರೆತರುವ ಬಯಕೆಯನ್ನು ವಿರಾಟ್ ವ್ಯಕ್ತಪಡಿಸಿದ್ದಾರೆ ಮತ್ತು ಡಿವಿಲಿಯರ್ಸ್ ಕೂಡ ಐಪಿಎಲ್‌ಗೆ ಮರಳುವ ಉಸ್ತುಕದಲ್ಲಿದ್ದಾರೆ. ಆದರೆ ಇದು ಇನ್ನೂ ಸಂಭವಿಸಿಲ್ಲ. ಆರ್‌ಸಿಬಿ ಅಭಿಮಾನಿಗಳು ವಿರಾಟ್-ಡಿವಿಲಿಯರ್ಸ್ ಜೋಡಿಯನ್ನು ಮತ್ತೊಮ್ಮೆ ಒಟ್ಟಿಗೆ ನೋಡಲು ತುದಿಗಾಲಲ್ಲಿ ಕಾಯುತ್ತಿದ್ದಾರೆ.




