
ಭಾರತ ಮತ್ತು ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಲಂಡನ್ನ ಲಾರ್ಡ್ಸ್ ಮೈದಾನದಲ್ಲಿ ಜರುಗಲಿರುವ ಈ ಪಂದ್ಯಕ್ಕಾಗಿ ಇಂಗ್ಲೆಂಡ್ ತಂಡ ಈಗಾಗಲೇ ಪ್ಲೇಯಿಂಗ್ ಇಲೆವೆನ್ ಘೋಷಿಸಿದೆ. ಇತ್ತ ಕಳೆದ ಬಾರಿಯ ಪಂದ್ಯದಿಂದ ಹೊರಗುಳಿದಿದ್ದ ಜಸ್ಪ್ರೀತ್ ಬುಮ್ರಾ ಲಾರ್ಡ್ಸ್ನಲ್ಲಿ ಕಣಕ್ಕಿಳಿಯುವುದನ್ನು ಟೀಮ್ ಇಂಡಿಯಾ ನಾಯಕ ಶುಭ್ಮನ್ ಗಿಲ್ ಖಚಿತಪಡಿಸಿದ್ದಾರೆ.

ಇದರೊಂದಿಗೆ ಲಾರ್ಡ್ಸ್ ಮೈದಾನದಲ್ಲಿ ನಂಬರ್ ಒನ್ಗಳ ಮುಖಾಮುಖಿ ಕೂಡ ಕನ್ಫರ್ಮ್ ಆಗಿದೆ. ಅಂದರೆ ಪ್ರಸ್ತುತ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿರುವ ನಂಂಬರ್ 1 ಬ್ಯಾಟರ್ ಹಾಗೂ ನಂಬರ್ 1 ಬೌಲರ್ ಲಾರ್ಡ್ಸ್ ಮೈದಾನದಲ್ಲಿ ಎದುರು ಬದುರಾಗಲಿದ್ದಾರೆ. ಇಲ್ಲಿ ಬ್ಯಾಟರ್ಗಳ ಪಟ್ಟಿಯಲ್ಲಿ ಬ್ರೂಕ್ ಅಗ್ರಸ್ಥಾನದಲ್ಲಿದ್ದರೆ, ಬೌಲರ್ಗಳ ವಿಭಾಗದಲ್ಲಿ ಬುಮ್ರಾ ಮೊದಲ ಸ್ಥಾನದಲ್ಲಿದ್ದಾರೆ.

ಐಸಿಸಿ ಪ್ರಕಟಿಸಿರುವ ಟೆಸ್ಟ್ ಬ್ಯಾಟರ್ಗಳ ನೂತನ ಶ್ರೇಯಾಂಕ ಪಟ್ಟಿಯಲ್ಲಿ ಹ್ಯಾರಿ ಬ್ರೂಕ್ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಎಡ್ಜ್ಬಾಸ್ಟನ್ ಸ್ಟೇಡಿಯಂನಲ್ಲಿ ನಡೆದ ಭಾರತದ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ದ ಬ್ರೂಕ್ ಒಟ್ಟು 886 ಅಂಕಗಳನ್ನು ಪಡೆದುಕೊಂಡಿದ್ದಾರೆ.

ಇನ್ನು ಟೆಸ್ಟ್ ಬೌಲರ್ಗಳ ಪಟ್ಟಿಯಲ್ಲಿ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಅಗ್ರಸ್ಥಾನ ಅಲಂಕರಿಸಿದ್ದಾರೆ. ಹೆಡಿಂಗ್ಲೆ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್ ಕಬಳಿಸಿ ಮಿಂಚಿದ್ದ ಬುಮ್ರಾ ಇದೀಗ 898 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಹೀಗಾಗಿ ಲಾರ್ಡ್ಸ್ ಮೈದಾನದಲ್ಲಿ ಬುಮ್ರಾ ಹಾಗೂ ಬ್ರೂಕ್ ಕಡೆಯಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

ಅಂದಹಾಗೆ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಲಾರ್ಡ್ಸ್ ಮೈದಾನದಲ್ಲಿ ಈವರೆಗೆ 19 ಟೆಸ್ಟ್ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಟೀಮ್ ಇಂಡಿಯಾ ಗೆದ್ದಿರುವುದು ಕೇವಲ 3 ಬಾರಿ ಮಾತ್ರ. ಇನ್ನುಳಿದ 12 ಮ್ಯಾಚ್ಗಳಲ್ಲಿ ಇಂಗ್ಲೆಂಡ್ ತಂಡ ಜಯ ಸಾಧಿಸಿದೆ. ಹಾಗೆಯೇ 4 ಪಂದ್ಯಗಳು ಡ್ರಾನಲ್ಲಿ ಕೊನೆಗೊಂಡಿದೆ. ಇದಾಗ್ಯೂ 2021 ರಲ್ಲಿ ಆಂಗ್ಲರನ್ನು ಲಾರ್ಡ್ಸ್ ಮೈದಾನದಲ್ಲಿ ಬಗ್ಗು ಬಡಿಯುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿತ್ತು. ಹೀಗಾಗಿ ಈ ಬಾರಿ ಕೂಡ ಭಾರತೀಯ ಪಡೆಗಳಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.