
ಹೈದರಾಬಾದ್ನಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲೇ ಜೋ ರೂಟ್ (Joe Root) ವಿಶೇಷ ದಾಖಲೆ ಬರೆದಿದ್ದಾರೆ. ಈ ದಾಖಲೆಯನ್ನು ಬರೆದಿರುವುದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ರೆಕಾರ್ಡ್ ಅನ್ನು ಬ್ರೇಕ್ ಮಾಡುವ ಮೂಲಕ ಎಂಬುದು ವಿಶೇಷ.

ಅಂದರೆ ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು. ಇಂಗ್ಲೆಂಡ್ ವಿರುದ್ಧ 32 ಟೆಸ್ಟ್ ಪಂದ್ಯಗಳನ್ನಾಡಿರುವ ಸಚಿನ್ 7 ಶತಕಗಳೊಂದಿಗೆ 2535 ರನ್ ಬಾರಿಸಿ ದಾಖಲೆ ಬರೆದಿದ್ದರು.

ಇದೀಗ ಟೀಮ್ ಇಂಡಿಯಾ ವಿರುದ್ಧ 10 ರನ್ ಕಲೆಹಾಕುವುದರೊಂದಿಗೆ ಈ ದಾಖಲೆ ಜೋ ರೂಟ್ ಪಾಲಾಗಿದೆ. ಭಾರತದ ವಿರುದ್ಧ 27 ಟೆಸ್ಟ್ ಪಂದ್ಯಗಳನ್ನಾಡಿರುವ ಜೋ ರೂಟ್ 9 ಭರ್ಜರಿ ಶತಕಗಳೊಂದಿಗೆ 2536+ ರನ್ ಕಲೆಹಾಕಿದ್ದಾರೆ. ಈ ಮೂಲಕ ಇಂಡೊ-ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಅತ್ಯಧಿಕ ರನ್ ಬಾರಿಸಿದ ಬ್ಯಾಟರ್ ಎಂಬ ದಾಖಲೆಯನ್ನು ಜೋ ರೂಟ್ ತಮ್ಮದಾಗಿಸಿಕೊಂಡಿದ್ದಾರೆ.

33 ಓವರ್ಗಳ ಮುಕ್ತಾಯದ ವೇಳೆ 26 ರನ್ಗಳೊಂದಿಗೆ ಕ್ರೀಸ್ನಲ್ಲಿರುವ ಜೋ ರೂಟ್ ಈ ಪಂದ್ಯದಲ್ಲಿ 48 ರನ್ ಬಾರಿಸಿದರೆ ಮತ್ತೊಂದು ದಾಖಲೆ ಕೂಡ ಅವರ ಹೆಸರಿಗೆ ಸೇರ್ಪಡೆಯಾಗಲಿದೆ. ಅಂದರೆ ಭಾರತದಲ್ಲಿ ಟೀಮ್ ಇಂಡಿಯಾ ವಿರುದ್ಧ ಟೆಸ್ಟ್ನಲ್ಲಿ 1000 ರನ್ ಪೂರೈಸಲು ರೂಟ್ಗೆ ಕೇವಲ 22 ರನ್ಗಳ ಅವಶ್ಯಕತೆಯಿದೆ.

ಭಾರತದ ಪಿಚ್ನಲ್ಲಿ 50.10 ಸರಾಸರಿ ಹೊಂದಿರುವ ಜೋ ರೂಟ್ ಕಡೆಯಿಂದ ಈ ಬಾರಿ ಕೂಡ ಭರ್ಜರಿ ಪ್ರದರ್ಶನ ನಿರೀಕ್ಷಿಸಬಹುದು. ಈ ಮೂಲಕ ಟೀಮ್ ಇಂಡಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್ನಲ್ಲಿ ಸಾವಿರ ರನ್ ಕಲೆಹಾಕಿದ ಸಾಧಕರ ಪಟ್ಟಿಗೂ ಜೋ ರೂಟ್ ಸೇರ್ಪಡೆಯಾಗಲಿದ್ದಾರೆ ಎಂದೇ ಎನ್ನಬಹುದು.