
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿ ಲೀಡ್ಸ್‌ನಲ್ಲಿ ಆರಂಭವಾಗಿದೆ. ಇದರೊಂದಿಗೆ ಕನ್ನಡಿಗ ಕರುಣ್ ನಾಯರ್ ಅವರ ವೃತ್ತಿಜೀವನದಲ್ಲಿ ಎರಡನೇ ಇನ್ನಿಂಗ್ಸ್ ಕೂಡ ಆರಂಭವಾಗಿದೆ. ಇದೇ ಇಂಗ್ಲೆಂಡ್ ವಿರುದ್ಧ ತನ್ನ ಟೆಸ್ಟ್ ವೃತ್ತಿಜೀವನವನ್ನು ಆರಂಭಿಸಿದ್ದ ಕರುಣ್, ಮತ್ತೀಗ ಅಂದರೆ ಬರೋಬ್ಬರಿ 8 ವರ್ಷಗಳ ನಂತರ ಭಾರತ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಅದು ಇಂಗ್ಲೆಂಡ್ ತಂಡದ ವಿರುದ್ಧ.

ಕಳೆದೆರಡು ವರ್ಷಗಳಿಂದ ದೇಶೀ ಕ್ರಿಕೆಟ್‌ನಲ್ಲಿ ರನ್ ಮಳೆ ಹರಿಸಿದ್ದ ಕರುಣ್ಗೆ ಮತ್ತೊಮ್ಮೆ ಟೀಂ ಇಂಡಿಯಾದಲ್ಲಿ ಸ್ಥಾನ ನೀಡಬೇಕು ಎಂಬ ಕೂಗು ಜೋರಾಗಿತ್ತು. ಅದರಂತೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದ ಕರುಣ್ಗೆ ಆಡುವ ಹನ್ನೊಂದರ ಬಳಗದಲ್ಲೂ ಅವಕಾಶ ಸಿಕ್ಕಿದೆ. ಹೀಗಾಗಿ ಗಂಡನ ಶ್ರಮಕ್ಕೆ ಪ್ರತಿಫಲ ಸಿಕ್ಕಿರುವುದರಿಂದ ಖುಷಿಯಾಗಿರುವ ಕರುಣ್ ಮಡದಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.

ಕರುಣ್ ನಾಯರ್ ಅವರ ಮಡದಿ ಸನಯಾ ಟಂಕರಿವಾಲಾ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕರುಣ್ ನಾಯರ್ ಅವರ ಫೋಟೋದೊಂದಿಗೆ ಒಂದು ಸ್ಟೋರಿ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು, ‘ಭಾರತದ ರಾಷ್ಟ್ರಗೀತೆ ಕೇಳಿದಾಗಲೆಲ್ಲಾ ನನಗೆ ರೋಮಾಂಚನವಾಗುತ್ತದೆ. ಈ ಬಾರಿ ರಾಷ್ಟ್ರಗೀತೆ ಕೇಳುವುದು ಇನ್ನು ತುಂಬಾ ವಿಶೇಷವಾಗಿದೆ.' ಎಂದು ಬರೆದುಕೊಂಡಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಕರುಣ್ ನಾಯರ್ ಅವರ ಅಂಕಿಅಂಶಗಳ ಬಗ್ಗೆ ಮಾತನಾಡಿದರೆ, ಅವರು ಟೀಂ ಇಂಡಿಯಾ ಪರ 7 ಪಂದ್ಯಗಳಲ್ಲಿ 62.33 ಸರಾಸರಿಯಲ್ಲಿ 374 ರನ್ ಗಳಿಸಿದ್ದಾರೆ. ಅವರ ಗರಿಷ್ಠ ವೈಯಕ್ತಿಕ ಸ್ಕೋರ್ ಔಟಾಗದೆ 303 ರನ್‌ಗಳು. ಅಚ್ಚರಿಯ ಸಂಗತಿಯೆಂದರೆ ಈ ತ್ರಿಶತಕದ ಇನ್ನಿಂಗ್ಸ್ ಕೂಡ ಇದೇ ಇಂಗ್ಲೆಂಡ್ ವಿರುದ್ಧವೇ ಬಂದಿತ್ತು.

ವಾಸ್ತವವಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಇದುವರೆಗೆ ತ್ರಿಶತಕ ಬಾರಿಸಿರುವುದು ಇಬ್ಬರು ಭಾರತೀಯ ಆಟಗಾರರು ಮಾತ್ರ. ಕರುಣ್ ನಾಯರ್ ಹೊರತುಪಡಿಸಿ, ಈ ಸಾಧನೆಯನ್ನು ವೀರೇಂದ್ರ ಸೆಹ್ವಾಗ್ ಮಾಡಿದ್ದಾರೆ. ಪ್ರಸ್ತುತ, ಅದ್ಭುತ ಫಾರ್ಮ್ನಲ್ಲಿರುವ ಕರುಣ್ ನಾಯರ್, ಈ ಟೆಸ್ಟ್ ಸರಣಿಗೂ ಮುನ್ನ ನಡೆದಿದ್ದ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ದ್ವಿಶತಕದ ಇನ್ನಿಂಗ್ಸ್ ಕೂಡ ಆಡಿದ್ದರು.

ಟೀಮ್ ಇಂಡಿಯಾದ ಪ್ಲೇಯಿಂಗ್ XI: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ಕರುಣ್ ನಾಯರ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ