
ಭಾರತ ಮತ್ತು ಇಂಗ್ಲೆಂಡ್ ನಡುವಣ 2ನೇ ಟೆಸ್ಟ್ ಪಂದವು ನಾಳೆಯಿಂದ (ಜುಲೈ 2) ಶುರುವಾಗಲಿದೆ. ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಯಾರು ಕಣಕ್ಕಿಳಿಯಲಿದ್ದಾರೆ ಎಂಬುದೇ ಕುತೂಹಲ. ಅತ್ತ ಪ್ಲೇಯಿಂಗ್ ಇಲೆವೆನ್ನಲ್ಲಿ ಇಬ್ಬರು ಸ್ಪಿನ್ನರ್ಗಳಿರಲಿದ್ದಾರೆ ಎಂದು ಟೀಮ್ ಇಂಡಿಯಾ ಸಹಾಯಕ ಕೋಚ್ ರಿಯಾನ್ ಟೆನ್ ಡೋಸ್ಚೇಟ್ ಸುಳಿವು ನೀಡಿದ್ದಾರೆ.

ಆದರೆ ಆ ಸ್ಪಿನ್ನರ್ ಯಾರು ಎಂಬುದಕ್ಕೆ ಇದೀಗ ಉತ್ತರ ಸಿಕ್ಕಿದೆ. ಬಲ್ಲ ಮೂಲಗಳ ಮಾಹಿತಿ ಪ್ರಕಾರ, ಟೀಮ್ ಇಂಡಿಯಾ ಪರ ದ್ವಿತೀಯ ಟೆಸ್ಟ್ನಲ್ಲಿ ವಾಷಿಂಗ್ಟನ್ ಸುಂದರ್ ಕಣಕ್ಕಿಳಿಯಲಿದ್ದಾರೆ. ಸುಂದರ್ ಸ್ಪಿನ್ ಆಲ್ರೌಂಡರ್. ಹೀಗಾಗಿ ಎಡ್ಜ್ಬಾಸ್ಟನ್ನಲ್ಲಿ ಸುಂದರ್ ಹಾಗೂ ಮತ್ತೋರ್ವ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿಯನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

ಇನ್ನು ವಿಶ್ರಾಂತಿಯ ಕಾರಣ ದ್ವಿತೀಯ ಟೆಸ್ಟ್ ಪಂದ್ಯದಿಂದ ಜಸ್ಪ್ರೀತ್ ಬುಮ್ರಾ ಹೊರಗುಳಿಯುವುದು ಖಚಿತ ಎಂದೇ ಹೇಳಬಹುದು. ಆದರೆ ಅತ್ತ ಎಡ್ಜ್ಬಾಸ್ಟನ್ನಲ್ಲಿ ಕಣಕ್ಕಿಳಿಯುವ ನಿರೀಕ್ಷೆಯಲ್ಲಿದ್ದ ಕುಲ್ದೀಪ್ ಯಾದವ್ ಈ ಪಂದ್ಯದ ವೇಳೆಯೂ ಬೆಂಚ್ ಕಾಯಬೇಕಾಗುತ್ತದೆ. ಏಕೆಂದರೆ ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್ ಸುಂದರ್ ಸ್ಪಿನ್ನರ್ಗಳಾಗಿ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಿಂದ ಕುಲ್ದೀಪ್ಗೆ ಚಾನ್ಸ್ ಸಿಗುವ ಸಾಧ್ಯತೆಯಿಲ್ಲ.

ಇಲ್ಲಿ ಜಸ್ಪ್ರೀತ್ ಬುಮ್ರಾ ಬದಲಿಗೆ ವಾಷಿಂಗ್ಟನ್ ಸುಂದರ್ ಕಣಕ್ಕಿಳಿಯುವುದು ಬಹುತೇಕ ಖಚಿತ. ಆದರೆ ನಿತೀಶ್ ಕುಮಾರ್ ರೆಡ್ಡಿ ಅವರ ಆಯ್ಕೆಯಿಂದ ಯಾರು ಹೊರಗುಳಿಯಲಿದ್ದಾರೆ ಎಂಬುದರ ಬಗ್ಗೆ ಯಾವುದೇ ಖಚಿತ ಮಾಹಿತಿ ಹೊರಬಿದ್ದಿಲ್ಲ. ರೆಡ್ಡಿ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಂಡರೆ, ಶಾರ್ದೂಲ್ ಠಾಕೂರ್ ಅಥವಾ ಪ್ರಸಿದ್ಧ್ ಕೃಷ್ಣ ಆಡುವ ಬಳಗದಿಂದ ಹೊರಬೀಳಬಹುದು. ಅದರಂತೆ ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ...

ಭಾರತ ಸಂಭಾವ್ಯ ಪ್ಲೇಯಿಂಗ್ ಇಲೆವೆನ್: ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ಶುಭ್ಮನ್ ಗಿಲ್, ರಿಷಭ್ ಪಂತ್, ಕರುಣ್ ನಾಯರ್, ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.