ಪ್ರಸ್ತುತ ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯನ್ನು ಆಡುತ್ತಿರುವ ಟೀಂ ಇಂಡಿಯಾಕ್ಕೆ ಮೂರನೇ ಪಂದ್ಯದ ಸೋಲಿನ ಆಘಾತ ಒಂದೆಡೆಯಾದರೆ, ಮತ್ತೊಂದೆಡೆ ಸ್ಟಾರ್ ಆಟಗಾರರ ಇಂಜುರಿ ಸಮಸ್ಯೆ ಮತ್ತೊಂದು ಹಿನ್ನಡೆಯಾಗಿತ್ತು. ಜಸ್ಪ್ರೀತ್ ಬುಮ್ರಾರಿಂದ ಹಿಡಿದು ನಿತೀಶ್ ಕುಮಾರ್ ರೆಡ್ಡಿವರೆಗೆ ಹಲವು ಆಟಗಾರರು ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದಾರೆ.
ಆದರೆ ಇದೀಗ ಭಾರತ ತಂಡದ ಸ್ಟಾರ್ ಆಟಗಾರರೊಬ್ಬರು ಫಿಟ್ ಆಗಿದ್ದು, ನಾಲ್ಕನೇ ಟಿ20 ಪಂದ್ಯದಲ್ಲಿ ಆಡಲು ಸಜ್ಜಾಗಿರುವುದರಿಂದ ತಂಡಕ್ಕೆ ಕೊಂಚ ರಿಲೀಫ್ ನೀಡಿದೆ. ಈ ಆಟಗಾರ ಮತ್ತ್ಯಾರು ಅಲ್ಲ ಗೇಮ್ ಫಿನಿಶರ್ ಖ್ಯಾತಿಯ ರಿಂಕು ಸಿಂಗ್. ಸರಣಿಯ ಮಧ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದ ರಿಂಕು ಇದೀಗ ಸಂಪೂರ್ಣ ಫಿಟ್ ಆಗಿದ್ದು ಆಡಲು ಸಿದ್ಧರಾಗಿದ್ದಾರೆ ಎಂದು ತಂಡದ ಸಹಾಯಕ ಕೋಚ್ ರಿಯಾನ್ ತೆಂಡಾಶ್ಕೇಟ್ ಹೇಳಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟಿ20 ಸರಣಿಯ ನಾಲ್ಕನೇ ಪಂದ್ಯ ಶುಕ್ರವಾರ, ಜನವರಿ 31 ರಂದು ಪುಣೆಯಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಸತತ 2 ದಿನ ಅಭ್ಯಾಸ ನಡೆಸಿತ್ತು. ಪಂದ್ಯದ ಒಂದು ದಿನದ ಮೊದಲು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೋಚ್ ರಯಾನ್, ರಿಂಕು ಸಿಂಗ್ ಬ್ಯಾಟಿಂಗ್ ಅಭ್ಯಾಸ ಮಾಡಿದ್ದು ಸಂಪೂರ್ಣವಾಗಿ ಫಿಟ್ ಆಗಿದ್ದಾರೆ. ಹೀಗಾಗಿ ಅವರು ಶುಕ್ರವಾರ ನಡೆಯಲಿರುವ ಸರಣಿಯ ಮೂರನೇ ಪಂದ್ಯಕ್ಕೆ ಲಭ್ಯವಾಗಲಿದ್ದಾರೆ ಎಂದು ಹೇಳಿದ್ದಾರೆ.
ಸರಣಿಯ ಮೊದಲ ಪಂದ್ಯವನ್ನು ಆಡಿದ್ದ ರಿಂಕು ಎರಡನೇ ಪಂದ್ಯಕ್ಕೂ ಮುನ್ನ ಇಂಜುರಿಗೆ ತುತ್ತಾಗಿದ್ದರು. ಇದರಿಂದಾಗಿ ಅವರು ಎರಡನೇ ಮತ್ತು ಮೂರನೇ ಪಂದ್ಯಗಳಿಂದ ಹೊರಗುಳಿದಿದ್ದರು. ಇದೀಗ ಮುಂದಿನ ಪಂದ್ಯದಲ್ಲಿ ರಿಂಕು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವುದು ಖಚಿತವಾಗಿದ್ದು, ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ರಿಂಕು ಸಿಂಗ್ ಆಗಮನದಿಂದಾಗಿ ತಂಡದಲ್ಲಿ ಬದಲಾವಣೆ ಖಚಿತವಾಗಿದ್ದು, ವಿಕೆಟ್‌ಕೀಪರ್ ಬ್ಯಾಟ್ಸ್ಮನ್ ಧ್ರುವ್ ಜುರೆಲ್ ಬದಲಿಗೆ ರಿಂಕು ಮತ್ತೆ ತಂಡ ಸೇರಿಕೊಳ್ಳಲಿದ್ದಾರೆ. ರಿಂಕು ಇಂಜುರಿಗೆ ತುತ್ತಾದ ಕಾರಣ ಕಳೆದ ಎರಡು ಪಂದ್ಯಗಳಲ್ಲಿ ಜುರೆಲ್‌ಗೆ ಅವಕಾಶ ಸಿಕ್ಕರೂ ಅವರು ಯಾವುದೇ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಕೇವಲ 4 ರನ್ ಗಳಿಸಿದ್ದ ಜುರೇಲ್, ರಾಜ್‌ಕೋಟ್‌ನಲ್ಲಿ ಕೇವಲ 2 ರನ್ ಗಳಿಸಿ ಔಟಾಗಿದ್ದರು.