- Kannada News Photo gallery Cricket photos ICC T20I rankings: Varun Chakravarthy climbs to 5th T20 bowlers rankings
ICC T20I Rankings: 16 ಪಂದ್ಯಗಳಲ್ಲೇ ಟಾಪ್-5ಗೆ ಎಂಟ್ರಿ ಕೊಟ್ಟ ವರುಣ್ ಚಕ್ರವರ್ತಿ
ICC T20I rankings: ಐಸಿಸಿ ಟಿ20 ಬೌಲರ್ಗಳ ನೂತನ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಬಾರಿ ಭಾರತದ ಮೂವರು ಬೌಲರ್ಗಳು ಅಗ್ರ ಹತ್ತರಲ್ಲಿ ಸ್ಥಾನ ಪಡೆದಿದ್ದಾರೆ. ಇವರಲ್ಲಿ ವರುಣ್ ಚಕ್ರವರ್ತಿ ಟಾಪ್ ಫೈವ್ನಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಅಂದರೆ ಕೇವಲ 16 ಪಂದ್ಯಗಳನ್ನಾಡಿರುವ ವರುಣ್ ಚಕ್ರವರ್ತಿ ಅಗ್ರ ಐದರಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
Updated on:Jan 30, 2025 | 11:16 AM

ಐಸಿಸಿ ಟಿ20 ಬೌಲರ್ಗಳ ನೂತನ ಶ್ರೇಯಾಂಕ ಪಟ್ಟಿಯ ಟಾಪ್-5 ನಲ್ಲಿ ಟೀಮ್ ಇಂಡಿಯಾ ಸ್ಪಿನ್ನರ್ ವರುಣ್ ಚಕ್ರವರ್ತಿ ಸ್ಥಾನ ಪಡೆದಿದ್ದಾರೆ. ಕೇವಲ 16 ಟಿ20 ಪಂದ್ಯಗಳನ್ನು ಮಾತ್ರ ಆಡಿರುವ ವರುಣ್ ಅತ್ಯದ್ಭುತ ಪ್ರದರ್ಶನ ನೀಡುವ ಮೂಲಕ ಇದೀಗ ಐಸಿಸಿ ಟಿ20 ಬೌಲರ್ಗಳ ಪಟ್ಟಿಯಲ್ಲಿ 5ನೇ ಸ್ಥಾನ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಇಂಗ್ಲೆಂಡ್ನ ಸ್ಪಿನ್ನರ್ ಆದಿಲ್ ರಶೀದ್. ಆದಿಲ್ ಒಟ್ಟು 718 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ವರುಣ್ ಚಕ್ರವರ್ತಿ 679 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದ್ದಾರೆ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ಮುಂದುವರೆಸಿದರೆ ಟಾಪ್-3 ಶ್ರೇಯಾಂಕದಲ್ಲಿ ವರುಣ್ ಕಾಣಿಸಿಕೊಳ್ಳಲಿದ್ದಾರೆ.

ವರುಣ್ ಚಕ್ರವರ್ತಿ ಭಾರತದ ಪರ ಈವರೆಗೆ ಆಡಿರುವುದು ಕೇವಲ 16 ಮ್ಯಾಚ್ಗಳನ್ನು ಮಾತ್ರ. ಈ ವೇಳೆ 375 ಎಸೆತಗಳನ್ನು ಎಸೆದಿರುವ ಅವರು ಒಟ್ಟು 29 ವಿಕೆಟ್ಗಳನ್ನು ಕಬಳಿಸಿದ್ದಾರೆ. ಈ ವಿಕೆಟ್ಗಳೊಂದಿಗೆ ಇದೀಗ ಐಸಿಸಿ ಟಿ20 ಬೌಲರ್ಗಳ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದ್ದಾರೆ.

ವಿಶೇಷ ಎಂದರೆ ವರುಣ್ ಚಕ್ರವರ್ತಿ ಕಳೆದ ಬಾರಿ 26ನೇ ಸ್ಥಾನದಲ್ಲಿದ್ದರು. ಇದೀಗ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ 3 ಪಂದ್ಯಗಳಿಂದ 10 ವಿಕೆಟ್ ಕಬಳಿಸಿ 25 ಸ್ಥಾನಗಳ ಜಿಗಿತ ಕಂಡಿದ್ದಾರೆ. ಈ ಮೂಲಕ ಜೀವಮಾನದ ಶ್ರೇಷ್ಠ ಶ್ರೇಯಾಂಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ವರುಣ್ ಚಕ್ರವರ್ತಿ ಅಲ್ಲದೆ, ಅಗ್ರ ಹತ್ತರಲ್ಲಿ ಟೀಮ್ ಇಂಡಿಯಾದ ಅರ್ಷದೀಪ್ ಸಿಂಗ್ ಹಾಗೂ ರವಿ ಬಿಷ್ಣೋಯ್ ಕೂಡ ಸ್ಥಾನ ಪಡೆದಿದ್ದಾರೆ. 664 ಅಂಕಗಳನ್ನು ಹೊಂದಿರುವ ಅರ್ಷದೀಪ್ ಸಿಂಗ್ 9ನೇ ಸ್ಥಾನ ಪಡೆದರೆ, ರವಿ ಬಿಷ್ಣೋಯ್ 659 ಅಂಕಗಳೊಂದಿಗೆ 10ನೇ ಸ್ಥಾನ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ.
Published On - 11:10 am, Thu, 30 January 25



















