
IND vs ENG: ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿ ಆರಂಭಕ್ಕೆ ಇನ್ನು ಉಳಿದಿರುವುದು ಕೇವಲ ಒಂದು ದಿನ ಮಾತ್ರ. ಅದಕ್ಕೂ ಮುನ್ನ ಇಂಗ್ಲೆಂಡ್ ತಂಡವು ತನ್ನ ಆಡುವ ಬಳಗವನ್ನು ಹೆಸರಿಸಿದೆ. ಆದರೆ ಇತ್ತ ಟೀಮ್ ಇಂಡಿಯಾ ಪರ ಕಣಕ್ಕಿಳಿಯುವವರು ಯಾರು ಎಂಬುದು ಇನ್ನೂ ಸಹ ನಿರ್ಧಾರವಾಗಿಲ್ಲ. ಅದರಲ್ಲೂ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯಿಂದ ತೆರವಾಗಿರುವ ಸ್ಥಾನಗಳನ್ನು ತುಂಬುವವರು ಯಾರೆಂಬುದೇ ಪ್ರಶ್ನೆ.

ಈ ಪ್ರಶ್ನೆಗೆ ಟೀಮ್ ಇಂಡಿಯಾದ ವಿಕೆಟ್ ಕೀಪರ್ ರಿಷಭ್ ಪಂತ್ ಉತ್ತರ ನೀಡಿದ್ದಾರೆ. ಲೀಡ್ಸ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಂತ್, ಭಾರತದ ಪರ ಶುಭ್ಮನ್ ಗಿಲ್ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ತಿಳಿಸಿದ್ದಾರೆ. ಈ ಹಿಂದೆ ಭಾರತ ಟೆಸ್ಟ್ ತಂಡದ ಪರ ವಿರಾಟ್ ಕೊಹ್ಲಿ 4ನೇ ಕ್ರಮಾಂಕದಲ್ಲಿ ಬಲ ತುಂಬುತ್ತಿದ್ದರು.

ಇದೀಗ ವಿರಾಟ್ ಕೊಹ್ಲಿಯ ಸ್ಥಾನ ತುಂಬಲು ಶುಭ್ಮನ್ ಗಿಲ್ ಸಿದ್ಧರಾಗಿದ್ದಾರೆ. ಅದರಂತೆ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶುಭ್ಮನ್ ಗಿಲ್ 4ನೇ ಕ್ರಮಾಂಕದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಐದನೇ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಕಣಕ್ಕಿಳಿಯುವುದು ಖಚಿತ. ಇದಾಗ್ಯೂ ಟಾಪ್-3 ನಲ್ಲಿ ಆಡುವವರು ಯಾರೆಂಬುದು ಇನ್ನೂ ಸಹ ನಿರ್ಧಾರವಾಗಿಲ್ಲ.

ಇದಕ್ಕೂ ಮುನ್ನ ಶುಭ್ಮನ್ ಗಿಲ್ 3ನೇ ಕ್ರಮಾಂಕದಲ್ಲಿ ಆಡುತ್ತಿದ್ದರು. ಇದೀಗ ಅವರು ನಾಲ್ಕನೇ ಕ್ರಮಾಂಕದಲ್ಲಿ ಆಡಲು ನಿರ್ಧರಿಸಿರುವುದರಿಂದ 3ನೇ ಕ್ರಮಾಂಕಕ್ಕೆ ಹೊಸ ಬ್ಯಾಟರ್ನನ್ನು ಆಯ್ಕೆ ಮಾಡಬೇಕಿದೆ. ಹೀಗಾಗಿ ಟೀಮ್ ಇಂಡಿಯಾದ ಟಾಪ್-3 ನಲ್ಲಿ ಕಾಣಿಸಿಕೊಳ್ಳುವವರು ಯಾರೆಂಬುದೇ ಈಗ ಕುತೂಹಲ.

ಪ್ರಸ್ತುತ ಮಾಹಿತಿ ಪ್ರಕಾರ, ಕೆಎಲ್ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಇನಿಂಗ್ಸ್ ಆರಂಭಿಸುವುದು ಬಹುತೇಕ ಖಚಿತವಾಗಿದೆ. ಆದರೆ ಮೂರನೇ ಕ್ರಮಾಂಕದಲ್ಲಿ ಯಾರನ್ನು ಆಡಿಸಬೇಕೆಂಬದರ ಬಗ್ಗೆ ಚರ್ಚೆ ಮುಂದುವರೆದಿದೆ. ಇಲ್ಲಿ ಸಾಯಿ ಸುದರ್ಶನ್ ಹಾಗೂ ಕರುಣ್ ನಾಯರ್ ನಡುವೆ ಪೈಪೋಟಿಯಿದ್ದು, ಇವರಲ್ಲಿ ಒಬ್ಬರು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ.

ಭಾರತ ಟೆಸ್ಟ್ ತಂಡ: ಶುಭ್ಮನ್ ಗಿಲ್ (ನಾಯಕ), ರಿಷಭ್ ಪಂತ್ (ಉಪನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ್ ಜುರೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ.