Shubman Gill: ಕೊನೆಗೂ ಅರ್ಧಶತಕ ಬಾರಿಸಿದ ಶುಭ್ಮನ್ ಗಿಲ್
TV9 Web | Updated By: ಝಾಹಿರ್ ಯೂಸುಫ್
Updated on:
Feb 04, 2024 | 2:39 PM
India vs England 2nd Test: ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಯುವ ದಾಂಡಿಗ ಶುಭ್ಮನ್ ಗಿಲ್ (Shubman Gill) ಆಕರ್ಷಕ ಅರ್ಧಶತಕ ಬಾರಿಸಿದ್ದಾರೆ. ಇದು ಶುಭ್ಮನ್ ಬ್ಯಾಟ್ನಿಂದ ಮೂರನೇ ಕ್ರಮಾಂಕದಲ್ಲಿ ಮೂಡಿಬಂದಿರುವ ಮೊದಲ ಅರ್ಧಶತಕ ಎಂಬುದು ವಿಶೇಷ.
1 / 7
India vs England 2nd Test: ಸತತ ವೈಫ್ಯದಿಂದ ಕಂಗೆಟ್ಟಿದ್ದ ಟೀಮ್ ಇಂಡಿಯಾದ ಯುವ ಬ್ಯಾಟರ್ ಶುಭ್ಮನ್ ಗಿಲ್ (Shubman Gill) ಬ್ಯಾಟ್ನಿಂದ ಕೊನೆಗೂ ಅರ್ಧಶತಕ ಮೂಡಿಬಂದಿದೆ. ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಗಿಲ್ ಕೇವಲ 59 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದಾರೆ.
2 / 7
ಇದರೊಂದಿಗೆ ಕಳೆದ 11 ಇನಿಂಗ್ಸ್ಗಳಲ್ಲಿನ ಕಳಪೆ ಬ್ಯಾಟಿಂಗ್ಗೆ ವಿರಾಮ ಬಿದ್ದಂತಾಗಿದೆ. ಅಂದರೆ ಶುಭ್ಮನ್ ಗಿಲ್ ಕೊನೆಯ 11 ಇನಿಂಗ್ಸ್ಗಳಲ್ಲಿ ಒಂದೇ ಒಂದು ಅರ್ಧಶತಕ ಬಾರಿಸಿರಲಿಲ್ಲ. ಇದುವರೆಗೆ ಕ್ರಮವಾಗಿ 47, 6, 10, 29*, 2, 26, 36, 10, 23, 0, 34 ರನ್ ಬಾರಿಸಿ ಔಟಾಗಿದ್ದರು.
3 / 7
ವಿಶೇಷ ಎಂದರೆ ಮಾರ್ಚ್ 12, 2023 ರಲ್ಲಿ ಕೊನೆಯ ಬಾರಿ ಶತಕ ಸಿಡಿಸಿದ್ದ ಶುಭ್ಮನ್ ಗಿಲ್ ಆ ಬಳಿಕ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಇದೀಗ ಇಂಗ್ಲೆಂಡ್ ವಿರುದ್ಧ ಅರ್ಧಶತಕ ಬಾರಿಸುವ ಮೂಲಕ ಮತ್ತೆ ಫಾರ್ಮ್ ಕಂಡುಕೊಳ್ಳುವತ್ತ ಹೆಜ್ಜೆಯನ್ನಿಟ್ಟಿದ್ದಾರೆ.
4 / 7
ಶುಭ್ಮನ್ ಗಿಲ್ ಅವರ ಅರ್ಧಶತಕದ ನೆರವಿನಿಂದ ಈ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ 35 ಓವರ್ಗಳ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾ 4 ವಿಕೆಟ್ 130 ರನ್ ಕಲೆಹಾಕಿದೆ. ಸದ್ಯ ಕ್ರೀಸ್ನಲ್ಲಿ ಗಿಲ್ ಹಾಗೂ ಅಕ್ಷರ್ ಪಟೇಲ್ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
5 / 7
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಪ್ರಥಮ ಇನಿಂಗ್ಸ್ನಲ್ಲಿ ಯಶಸ್ವಿ ಜೈಸ್ವಾಲ್ (209) ದ್ವಿಶತಕ ಬಾರಿಸಿ ಮಿಂಚಿದ್ದರು. ಈ ದ್ವಿಶತಕದ ನೆರವಿನಿಂದ ಭಾರತ ತಂಡ ಮೊದಲ ಇನಿಂಗ್ಸ್ನಲ್ಲಿ 396 ರನ್ ಕಲೆಹಾಕಿತು.
6 / 7
ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಇಂಗ್ಲೆಂಡ್ ತಂಡವು ಜಸ್ಪ್ರೀತ್ ಬುಮ್ರಾ ಅವರ ಮಾರಕ ದಾಳಿಗೆ ತತ್ತರಿಸಿತು. ಕರಾರುವಾಕ್ ದಾಳಿ ಸಂಘಟಿಸಿದ ಬುಮ್ರಾ ಕೇವಲ 45 ರನ್ ನೀಡಿ 6 ವಿಕೆಟ್ ಪಡೆದಿದ್ದರು. ಪರಿಣಾಮ ಇಂಗ್ಲೆಂಡ್ ತಂಡವು ಮೊದಲ ಇನಿಂಗ್ಸ್ನಲ್ಲಿ 253 ರನ್ಗಳಿಗೆ ಆಲೌಟ್ ಆಯಿತು.
7 / 7
143 ರನ್ಗಳ ಮೊದಲ ಇನಿಂಗ್ಸ್ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಟೀಮ್ ಇಂಡಿಯಾಗೆ ಅರ್ಧಶತಕ ಬಾರಿಸಿ ಶುಭ್ಮನ್ ಗಿಲ್ ಆಸರೆಯಾಗಿ ನಿಂತಿದ್ದಾರೆ. ಈ ಮೂಲಕ ಭಾರತ ತಂಡವು ಭೋಜನ ವಿರಾಮದ ವೇಳೆಗೆ 273 ರನ್ಗಳ ಮುನ್ನಡೆ ಸಾಧಿಸಿದೆ.
Published On - 11:46 am, Sun, 4 February 24