ನಾಗ್ಪುರದಲ್ಲಿ ನಡೆದ ಏಕದಿನ ಸರಣಿಯ ಮೊದಲ ಪಂದ್ಯವನ್ನು ಟೀಂ ಇಂಡಿಯಾ ಭರ್ಜರಿಯಾಗಿ ಗೆದ್ದುಕೊಂಡಿದೆ. ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಪಡೆ ಬ್ರಿಟಿಷರನ್ನು 4 ವಿಕೆಟ್‌ಗಳಿಂದ ಸೋಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಕೇವಲ 248 ರನ್‌ಗಳಿಗೆ ಆಲೌಟ್ ಆಯಿತು. 249 ರನ್‌ಗಳ ಗುರಿಯನ್ನು ಭಾರತ 38.4 ಓವರ್‌ಗಳಲ್ಲಿ ಕೇವಲ 6 ವಿಕೆಟ್‌ಗಳನ್ನು ಕಳೆದುಕೊಂಡು ತಲುಪಿತು.
ತಂಡದ ಪರ ಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಹರ್ಷಿತ್ ರಾಣಾ ತಮ್ಮ ಚೊಚ್ಚಲ ಏಕದಿನ ಪಂದ್ಯದಲ್ಲೇ ಮೂರು ವಿಕೆಟ್‌ಗಳನ್ನು ಕಬಳಿಸಿದರೆ, ರವೀಂದ್ರ ಜಡೇಜಾ ಕೂಡ ಕೇವಲ 26 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಪಡೆದರು. ಇತ್ತ ಬ್ಯಾಟಿಂಗ್ನಲ್ಲಿ ಕಮಾಲ್ ಮಾಡಿದ ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್ ಹಾಗೂ ಅಕ್ಷರ್ ಪಟೇಲ್ ತಲಾ ಅರ್ಧಶತಕದ ಕೊಡುಗೆ ನೀಡಿದರು.
ಮೊದಲ ಏಕದಿನ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಟೀಂ ಇಂಡಿಯಾ ಬರೋಬ್ಬರಿ 414 ದಿನಗಳ ನಂತರ ಏಕದಿನ ಪಂದ್ಯವೊಂದರಲ್ಲಿ ಗೆಲುವು ಸಾಧಿಸಿದೆ. ವಾಸ್ತವವಾಗಿ ಕಳೆದ ವರ್ಷ ಅಂದರೆ 2024 ರಲ್ಲಿ ಟೀಂ ಇಂಡಿಯಾ ಕೇವಲ ಮೂರೇ ಮೂರು ಏಕದಿನ ಪಂದ್ಯಗಳನ್ನಾಡಿತ್ತು. ಆದರೆ ಈ ಮೂರು ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಭಾರತ ಗೆದ್ದಿರಲಿಲ್ಲ.
ಮೂರು ಏಕದಿನ ಪಂದ್ಯಗಳ ಸರಣಿಗಾಗಿ ಶ್ರೀಲಂಕಾ ಪ್ರವಾಸ ಮಾಡಿದ್ದ ಟೀಂ ಇಂಡಿಯಾ ಆಡಿದ ಮೂರು ಪಂದ್ಯಗಳಲ್ಲಿ ಎರಡಲ್ಲಿ ಸೋತು, ಒಂದು ಪಂದ್ಯವನ್ನು ಟೈನಲ್ಲಿ ಅಂತ್ಯಗೊಳಿಸಿತ್ತು. ಹೀಗಾಗಿ ಕಳೆದ ವರ್ಷ ಆಡಿದ್ದ ಒಂದೇ ಒಂದು ಸರಣಿಯಲ್ಲಿ ಟೀಂ ಇಂಡಿಯಾಕ್ಕೆ ಒಂದು ಪಂದ್ಯವನ್ನೂ ಗೆದ್ದುಕೊಳ್ಳಲು ಆಗಿರಲಿಲ್ಲ.
ಇದಕ್ಕೂ ಮುನ್ನ ಅಂದರೆ 2023 ರಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಏಕದಿನ ಪಂದ್ಯಗಳಲ್ಲಿ ಟೀಂ ಇಂಡಿಯಾ 2 ಪಂದ್ಯಗಳನ್ನು ಗೆದ್ದು 1 ಪಂದ್ಯದಲ್ಲಿ ಸೋಲನುಭವಿಸಿತ್ತು. ಡಿಸೆಂಬರ್ 21, 2023 ರಂದು ನಡೆದಿದ್ದ ಈ ಸರಣಿಯ ಕೊನೆಯ ಏಕದಿನ ಪಂದ್ಯವನ್ನು 78ರನ್ಗಳಿಂದ ಗೆದ್ದುಕೊಂಡಿದ್ದೆ ಈ ಮಾದರಿಯಲ್ಲಿ ಟೀಂ ಇಂಡಿಯಾದ ಕೊನೆಯ ಗೆಲುವಾಗಿತ್ತು.
Published On - 7:22 am, Fri, 7 February 25