ಕೆಎಲ್ ರಾಹುಲ್ ಪಾಲಿಗೆ ಮುಳುವಾದ ಬೆಂಗಳೂರು ಟೆಸ್ಟ್: ಪುಣೆಯಲ್ಲಿ ಕನ್ನಡಿಗ ಔಟ್
KL Rahul: ಕೆಎಲ್ ರಾಹುಲ್ ಟೀಮ್ ಇಂಡಿಯಾ 53 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 91 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಕನ್ನಡಿಗ 8 ಶತಕ ಹಾಗೂ 15 ಅರ್ಧಶತಕಗಳೊಂದಿಗೆ 2981 ರನ್ ಕಲೆಹಾಕಿದ್ದಾರೆ. ಅಂದರೆ ಪ್ರಸ್ತುತ ತಂಡದಲ್ಲಿರುವ ಅನುಭವಿ ಆಟಗಾರರಲ್ಲಿ ರಾಹುಲ್ ಕೂಡ ಒಬ್ಬರು. ಇದಾಗ್ಯೂ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.
1 / 9
ಭಾರತ ಮತ್ತು ನ್ಯೂಝಿಲೆಂಡ್ ನಡುವಣ ದ್ವಿತೀಯ ಟೆಸ್ಟ್ ಪಂದ್ಯವು ಶುರುವಾಗಿದೆ. ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಮೂರು ಬದಲಾವಣೆ ಮಾಡಿದೆ. ಈ ಬದಲಾವಣೆಯೊಂದಿಗೆ ಅನುಭವಿ ಆಟಗಾರ ಕೆಎಲ್ ರಾಹುಲ್ ಪ್ಲೇಯಿಂಗ್ ಇಲೆವೆನ್ನಿಂದ ಹೊರಬಿದ್ದಿದ್ದಾರೆ.
2 / 9
ಭಾರತ ತಂಡದ ಖಾಯಂ ಸದಸ್ಯರಾಗಿದ್ದ ರಾಹುಲ್ ಪಾಲಿಗೆ ಮುಳುವಾಗಿದ್ದು ಬೆಂಗಳೂರು ಟೆಸ್ಟ್ ಪಂದ್ಯ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕೆಎಲ್ಆರ್ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದರು. ಹೀಗಾಗಿಯೇ ಇದೀಗ ರಾಹುಲ್ ಅವರನ್ನು ಕೈ ಬಿಟ್ಟು ಸರ್ಫರಾಝ್ ಖಾನ್ಗೆ ಆಡುವ ಬಳಗದಲ್ಲಿ ಚಾನ್ಸ್ ನೀಡಲಾಗಿದೆ.
3 / 9
ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಎರಡು ಇನಿಂಗ್ಸ್ಗಳಿಂದ ಕಲೆಹಾಕಿದ್ದು ಕೇವಲ 12 ರನ್ಗಳು ಮಾತ್ರ. ಮೊದಲ ಇನಿಂಗ್ಸ್ನಲ್ಲಿ ಶೂನ್ಯಕ್ಕೆ ಔಟಾದರೆ, ನಿರ್ಣಾಯಕವಾಗಿದ್ದ ಎರಡನೇ ಇನಿಂಗ್ಸ್ನಲ್ಲಿ 12 ರನ್ಗಳಿಸಿ ನಿರಾಸೆ ಮೂಡಿಸಿದರು.
4 / 9
ಈ ಎರಡು ಇನಿಂಗ್ಸ್ಗಳೇ ಈಗ ಕೆಎಲ್ ರಾಹುಲ್ ಪಾಲಿಗೆ ಮುಳುವಾಗಿದೆ. ಏಕೆಂದರೆ ತವರು ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿರುವ ಕನ್ನಡಿಗನನ್ನು ಆಡುವ ಬಳಗದಿಂದ ಕೈ ಬಿಡಲು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ನಿರ್ಧರಿಸಿದೆ. ಇದಕ್ಕೂ ಮುನ್ನ ಕೆಎಲ್ ರಾಹುಲ್ ಬಾಂಗ್ಲಾದೇಶ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ 43 ಎಸೆತಗಳಲ್ಲಿ 68 ರನ್ ಬಾರಿಸಿದ್ದರು ಎಂಬುದು ಇಲ್ಲಿ ಉಲ್ಲೇಖಾರ್ಹ.
5 / 9
ಆದರೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ವೈಫಲ್ಯವೇ ಕೆಎಲ್ ರಾಹುಲ್ ಅವರ ಬ್ಯಾಟಿಂಗ್ ಸಾಮರ್ಥ್ಯವನ್ನು ಪ್ರಶ್ನಿಸುವಂತೆ ಮಾಡಿದೆ. ಅದರಲ್ಲೂ ಕ್ರೀಸ್ ಕಚ್ಚಿ ನಿಲ್ಲಲು ಪರದಾಡಿದ್ದ ರಾಹುಲ್ ಅವರ ಬ್ಯಾಟಿಂಗ್ ವೈಖರಿ ಬಗ್ಗೆ ಟೀಕೆಗಳು ಕೇಳಿ ಬಂದಿದ್ದವು. ಈ ಟೀಕೆ ಟಿಪ್ಪಣಿಗಳ ಬೆನ್ನಲ್ಲೇ ಇದೀಗ ಪ್ಲೇಯಿಂಗ್ ಇಲೆವೆನ್ನಿಂದ ಹೊರಬಿದ್ದಿದ್ದಾರೆ.
6 / 9
ಅತ್ತ ಶುಭ್ಮನ್ ಗಿಲ್ ಅವರ ಅನುಪಸ್ಥಿತಿಯಲ್ಲಿ ತಂಡದಲ್ಲಿ ಅವಕಾಶ ಪಡೆದಿದ್ದ ಸರ್ಫರಾಝ್ ಖಾನ್ ಮೊದಲ ಟೆಸ್ಟ್ ಪಂದ್ಯದಲ್ಲಿ 150 ರನ್ಗಳ ಭರ್ಜರಿ ಶತಕ ಸಿಡಿಸಿದ್ದರು. ಈ ಮೂಲಕ 2ನೇ ಪಂದ್ಯದಲ್ಲೂ ಚಾನ್ಸ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಶುಭ್ಮನ್ ಗಿಲ್ ಕೂಡ 2ನೇ ಟೆಸ್ಟ್ ಪಂದ್ಯದಲ್ಲಿ ಮಿಂಚಿದರೆ ಕೆಎಲ್ ರಾಹುಲ್ ಮುಂಬರುವ ಮ್ಯಾಚ್ಗಳಲ್ಲೂ ಬೆಂಚ್ ಕಾಯಬೇಕಾಗಿ ಬರಬಹುದು.
7 / 9
ಒಟ್ಟಿನಲ್ಲಿ ಟೀಮ್ ಇಂಡಿಯಾದ ನಾಯಕನಾಗಿ, ಖಾಯಂ ಸದಸ್ಯರಾಗಿ ಮಿಂಚುತ್ತಿದ್ದ ಕೆಎಲ್ ರಾಹುಲ್ ಕಳಪೆ ಪ್ರದರ್ಶನದ ಮೂಲಕ ಇದೀಗ ಆಡುವ ಬಳಗದಲ್ಲೂ ಅವಕಾಶ ಪಡೆಯಲು ಹೆಣಗಾಡುವಂತಾಗಿರುವುದು ಮಾತ್ರ ದುರಂತ. | ಭಾರತ-ನ್ಯೂಝಿಲೆಂಡ್ ನಡುವಣ ದ್ವಿತೀಯ ಟೆಸ್ಟ್ ಪಂದ್ಯದ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿದೆ...
8 / 9
ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ರಿಷರ್ಭ ಪಂತ್ (ವಿಕೆಟ್ ಕೀಪರ್), ಸರ್ಫರಾಝ್ ಖಾನ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ, ಆಕಾಶ್ ದೀಪ್.
9 / 9
ನ್ಯೂಝಿಲೆಂಡ್ ಪ್ಲೇಯಿಂಗ್ 11: ಟಾಮ್ ಲ್ಯಾಥಮ್ (ನಾಯಕ), ಡೆವೊನ್ ಕಾನ್ವೇ, ವಿಲ್ ಯಂಗ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಟಿಮ್ ಸೌಥಿ, ಮಿಚೆಲ್ ಸ್ಯಾಂಟ್ನರ್, ಅಜಾಝ್ ಪಟೇಲ್, ವಿಲಿಯಂ ಒರೋಕ್.