188* ವಿಕೆಟ್ಸ್… ಇತಿಹಾಸ ನಿರ್ಮಿಸಿದ ರವಿಚಂದ್ರನ್ ಅಶ್ವಿನ್
India vs New Zealand, 2nd Test: ಪುಣೆಯಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ನ್ಯೂಝಿಲೆಂಡ್ ತಂಡವು ಬ್ಯಾಟಿಂಗ್ ಆಯ್ದುಕೊಂಡಿದೆ. ಅದರಂತೆ ಇನಿಂಗ್ಸ್ ಆರಂಭಿಸಿರುವ ಕಿವೀಸ್ ಪಡೆ ಭೋಜನಾ ವಿರಾಮದ ವೇಳೆಗೆ 2 ವಿಕೆಟ್ ಕಳೆದುಕೊಂಡು 92 ರನ್ ಕಲೆಹಾಕಿದೆ.
Updated on: Oct 24, 2024 | 11:36 AM

ಟೀಮ್ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಪುಣೆಯಲ್ಲಿ ನಡೆಯುತ್ತಿರುವ ನ್ಯೂಝಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಎರಡು ವಿಕೆಟ್ ಕಬಳಿಸುವುದರೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ಬೌಲರ್ ಎನಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಈ ದಾಖಲೆ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಸ್ಪಿನ್ನರ್ ನಾಥನ್ ಲಿಯಾನ್ ಅಗ್ರಸ್ಥಾನದಲ್ಲಿದ್ದರು. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ 78 ಇನಿಂಗ್ಸ್ಗಳಲ್ಲಿ 1809.2 ಓವರ್ಗಳನ್ನು ಎಸೆದಿರುವ ಲಿಯಾನ್ ಒಟ್ಟು 187 ವಿಕೆಟ್ ಕಬಳಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಲಿಯಾನ್ ಅವರನ್ನು ಹಿಂದಿಕ್ಕಿ ಅಶ್ವಿನ್ ಅಗ್ರಸ್ಥಾನಕ್ಕೇರಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಟೆಸ್ಟ್ ಸರಣಿಯಲ್ಲಿ ಒಟ್ಟು 74 ಇನಿಂಗ್ಸ್ ಆಡಿರುವ ಅಶ್ವಿನ್ 1390* ಓವರ್ಗಳಲ್ಲಿ ಎಸೆದಿದ್ದಾರೆ. ಈ ವೇಳೆ ಒಟ್ಟು 188* ವಿಕೆಟ್ಗಳನ್ನು ಪಡೆದು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ WTC ನಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ಬೌಲರ್ ಎನಿಸಿಕೊಂಡಿದ್ದಾರೆ.

ಸದ್ಯ 188 ವಿಕೆಟ್ ಕಬಳಿಸಿರುವ ರವಿಚಂದ್ರನ್ ಅಶ್ವಿನ್ಗೆ 200 ವಿಕೆಟ್ಗಳ ಸಾಧನೆ ಮಾಡಲು ಇನ್ನೂ 12 ವಿಕೆಟ್ಗಳ ಅವಶ್ಯಕತೆಯಿದೆ. ಇದೀಗ ನ್ಯೂಝಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಇದಾದ ಬಳಿಕ ಮುಂಬೈನಲ್ಲಿ ಮೂರನೇ ಟೆಸ್ಟ್ ಪಂದ್ಯ ಜರುಗಲಿದೆ. ಈ ಪಂದ್ಯಗಳ ಮೂಲಕ ಅಶ್ವಿನ್ ಇನ್ನೂರು ವಿಕೆಟ್ಗಳ ಗಡಿದಾಟಲಿದ್ದಾರಾ ಕಾದು ನೋಡಬೇಕಿದೆ.

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ಬೌಲರ್ಗಳ ಪಟ್ಟಿಯಲ್ಲಿ ರವಿಚಂದ್ರನ್ ಅಶ್ವಿನ್ ಏಳನೇ ಸ್ಥಾನದಲ್ಲಿದ್ದಾರೆ. ಈವರೆಗೆ 104* ಟೆಸ್ಟ್ ಪಂದ್ಯಗಳನ್ನಾಡಿರುವ ಅಶ್ವಿನ್ 4453 ಓವರ್ಗಳ ಮೂಲಕ ಒಟ್ಟು 530* ವಿಕೆಟ್ ಕಬಳಿಸಿದ್ದಾರೆ. ಅಲ್ಲದೆ ಅನಿಲ್ ಕುಂಬ್ಳೆ (619) ಬಳಿಕ ಟೆಸ್ಟ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ.
























