
ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ 2023ರ ವಿಶ್ವಕಪ್ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ 29 ಎಸೆತಗಳಲ್ಲಿ 47 ರನ್ ಸಿಡಿಸಿ ವಿಕೆಟ್ ಒಪ್ಪಿಸಿದ್ದಾರೆ.

ಈ ಪಂದ್ಯದಲ್ಲಿ ಆರಂಭದಿಂದಲೂ ಅಬ್ಬರದ ಬ್ಯಾಟಿಂಗ್ ಮಾಡಿದ ರೋಹಿತ್, ತಮ್ಮ ಅಲ್ಪ ಇನ್ನಿಂಗ್ಸ್ನಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿದರು. ಈ ಮೂಲಕ ವಿಶ್ವಕಪ್ ಇತಿಹಾಸದಲ್ಲಿ ಅಪರೂಪದ ದಾಖಲೆಯನ್ನು ಬರೆದರು.

ಕಿವೀಸ್ ವಿರುದ್ಧ 4 ಬೃಹತ್ ಸಿಕ್ಸರ್ ಸಿಡಿಸಿದ ಹಿಟ್ಮ್ಯಾನ್ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರ ಪೈಕಿ ಕ್ರಿಸ್ ಗೇಲ್ ದಾಖಲೆ ಮುರಿದು ಅಗ್ರಸ್ಥಾನಕ್ಕೇರಿದ್ದಾರೆ.

2015 ರಿಂದ ಏಕದಿನ ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಪರ ಆಡುತ್ತಿರುವ ರೋಹಿತ್, ಈ ಮೂರು ಆವೃತ್ತಿಗಳಲ್ಲಿ 27 ಪಂದ್ಯಗಳನ್ನಾಡಿದ್ದು, ಇದುವರೆಗೆ ಬರೋಬ್ಬರಿ 50 ಸಿಕ್ಸರ್ಗಳನ್ನು ಸಿಡಿಸಿದ್ದಾರೆ.

ರೋಹಿತ್ಗೂ ಮೊದಲು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಕ್ರಿಸ್ ಗೇಲ್ 35 ವಿಶ್ವಕಪ್ ಪಂದ್ಯಗಳಲ್ಲಿ 49 ಸಿಕ್ಸರ್ ಸಿಡಿಸಿದ್ದರು.

ಈ ಇಬ್ಬರ ಬಳಿಕ ಮೂರನೇ ಸ್ಥಾನದಲ್ಲಿರುವ ಗ್ಲೆನ್ ಮ್ಯಾಕ್ಸ್‌ವೆಲ್ 25 ವಿಶ್ವಕಪ್ ಪಂದ್ಯಗಳಿಂದ 43 ಸಿಕ್ಸರ್ ಸಿಡಿಸಿದ್ದಾರೆ.

ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಆಡಿರುವ 23 ವಿಶ್ವಕಪ್ ಪಂದ್ಯಗಳಿಂದ 37 ಸಿಕ್ಸರ್ ಸಿಡಿಸಿ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ.

ಪ್ರಸ್ತುತ ಆಸ್ಟ್ರೇಲಿಯಾ ಪರ ಅತ್ಯಧಿಕ ರನ್ ಸ್ಕೋರರ್ ಎನಿಸಿಕೊಂಡಿರುವ ಡೇವಿಡ್ ವಾರ್ನರ್ ಆಡಿರುವ 25 ವಿಶ್ವಕಪ್ ಪಂದ್ಯಗಳಿಂದ 37 ಸಿಕ್ಸರ್ ಸಿಡಿಸಿದ್ದಾರೆ.