ಅಕ್ಟೋಬರ್ 24 ರಂದು ಭಾರತ-ಪಾಕಿಸ್ತಾನ್ ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಕೆಎಲ್ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ಕಣಕ್ಕಿಳಿಯುವುದು ಬಹುತೇಕ ಖಚಿತ. ಈ ಇಬ್ಬರು ಆಟಗಾರರು ಪಾಕ್ ವಿರುದ್ದ ಮೈದಾನಕ್ಕಿಳಿದರೆ ವಿಶೇಷ ಮೈಲುಗಲ್ಲನ್ನು ಮುಟ್ಟಲ್ಲಿದ್ದಾರೆ.
ಹೌದು, ಕೆಎಲ್ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ಭಾರತದ ಪರ 50 ಟಿ20 ಪಂದ್ಯಗಳನ್ನಾಡಿದ ಸಾಧನೆ ಮಾಡಲು ಇನ್ನು ಒಂದು ಪಂದ್ಯದ ಅವಶ್ಯಕತೆಯಿದೆ. ಇದೀಗ ತಮ್ಮ 50ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕ್ ಎದುರಾಗುತ್ತಿರುವುದು ವಿಶೇಷ. ಹೀಗಾಗಿ ಟಿ20 ವಿಶ್ವಕಪ್ನ ಭಾರತದ ಮೊದಲ ಪಂದ್ಯ ಪಾಂಡ್ಯ-ರಾಹುಲ್ ಪಾಲಿಗೆ ಮಹತ್ವದ್ದಾಗಿದೆ.
ಇನ್ನು ಪಾಕ್ ವಿರುದ್ದದ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ರಾಹುಲ್ ಮತ್ತು ಹಾರ್ದಿಕ್ ಟೀಮ್ ಇಂಡಿಯಾ ಪರ 50 ಟಿ20 ಪಂದ್ಯಗಳನ್ನಾಡಿದ 10 ನೇ ಮತ್ತು 11ನೇ ಆಟಗಾರರಾಗುತ್ತಾರೆ. ಹಾಗೆಯೇ ಮುಂದಿನ ನಾಲ್ಕು ಪಂದ್ಯಗಳಲ್ಲಿ ಅಶ್ವಿನ್ ಆಡಿದ್ರೆ ಅವರು ಕೂಡ ಭಾರತದ ಪರ 50 ಟಿ20 ಪಂದ್ಯಗಳನ್ನಾಡಿದ ಸಾಧನೆ ಮಾಡಲಿದ್ದಾರೆ.
ಭಾರತದ ಪರ ಅತೀ ಹೆಚ್ಚು ಟಿ20 ಪಂದ್ಯಗಳನ್ನಾಡಿದ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿದೆ. ಹಿಟ್ಮ್ಯಾನ್ 111 ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ. ಅಷ್ಟೇ ಅಲ್ಲದೆ ಭಾರತದ ಪರ 100 ಟಿ20 ಆಡಿದ ಏಕೈಕ ಆಟಗಾರ ಎಂಬ ದಾಖಲೆ ಕೂಡ ರೋಹಿತ್ ಶರ್ಮಾ ಹೆಸರಿನಲ್ಲಿದೆ.
ರೋಹಿತ್ ಶರ್ಮಾ ನಂತರದ ಸ್ಥಾನದಲ್ಲಿ ಎಂಎಸ್ ಧೋನಿ ಇದ್ದು, ಧೋನಿ 98 ಟಿ20 ಪಂದ್ಯಗಳನ್ನು ಆಡಿದ್ದಾರೆ. ಹಾಗೆಯೇ ಮೂರನೇ ಸ್ಥಾನದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇದ್ದು, ಕೊಹ್ಲಿ ಇದುವರೆಗೆ ಭಾರತದ ಪರ 90 ಟಿ20 ಪಂದ್ಯಗಳನ್ನು ಆಡಿದ್ದಾರೆ.