Updated on: Oct 10, 2022 | 10:37 AM
ರಾಂಚಿಯ ಜೆಎಸ್ಸಿಎ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತ (India vs South Africa) ಭರ್ಜರಿ ಜಯ ಸಾಧಿಸಿದೆ. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬೌಲರ್ಗಳು ನಿರೀಕ್ಷೆಗೆ ತಕ್ಕಂತೆ ಯಶಸ್ಸು ಸಾಧಿಸಲು ಸಾಧ್ಯವಾಗಲಿಲ್ಲ. ಆದರೆ, ಟೀಮ್ ಇಂಡಿಯಾ ಬ್ಯಾಟರ್ಗಳು ಅಮೋಘ ಆಟ ಪ್ರದರ್ಶಿಸಿದರು.
ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶನ್ (Ishan Kishan) ಶತಕದ ಜೊತೆಯಾಟ ಆಡಿ ತಂಡಕ್ಕೆ 7 ವಿಕೆಟ್ಗಳ ಜಯ ತಂದುಕೊಟ್ಟರು. ಈ ಮೂಲಕ ಭಾರತ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-1 ಅಂಕಗಳ ಅಂತರದ ಸಮಬಲ ಸಾಧಿಸಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ ತಂಡವು ನಿಗದಿತ 50 ಓವರ್ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 278 ರನ್ ಗಳಿಸಿತು. ಓಪನರ್ಗಳಾದ ಕ್ವಿಂಟನ್ ಡಿ ಕಾಕ್ (5) ಹಾಗೂ ಜೆನ್ಮನ್ ಮಲಾನ್ (25) ವಿಕೆಟ್‌ಗಳು ತಂಡವು 40 ರನ್ ಗಳಿಸುವಷ್ಟರಲ್ಲಿ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಈ ಹಂತದಲ್ಲಿ ಜೊತೆ ಸೇರಿದ ಆ್ಯಡನ್ ಮರ್ಕ್ರಮ್ ಹಾಗೂ ರೀಜಾ ಹೆನ್ರಿಕ್ಸ್ ಮೂರನೇ ವಿಕೆಟ್‌ಗೆ 129 ರನ್‌ಗಳ ಜೊತೆಯಾಟ ಆಡಿದರು. 76 ಎಸೆತಗಳನ್ನು ಎದುರಿಸಿದ ರೀಜಾ 9 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 74 ರನ್ ಗಳಿಸಿದರು. ಇನ್ನೊಂದೆಡೆ ಮರ್ಕ್ರಮ್ 89 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 79 ರನ್ ಚಚ್ಚಿದರು.
ಭಾರತದ ಪರ ಮೊಹಮ್ಮದ್ ಸಿರಾಜ್ 3 ವಿಕೆಟ್ ಕಿತ್ತರು.
279 ರನ್‌ಗಳ ಟಾರ್ಗೆಟ್ ಬೆನ್ನಟ್ಟಿದ ಟೀಮ್ ಇಂಡಿಯಾ 45.5 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಗುರಿ ತಲುಪುವ ಮೂಲಕ ಗೆಲುವಿನ ನಗೆ ಬೀರಿತು. ಭಾರತದ ಆರಂಭ ಕೂಡ ಚೆನ್ನಾಗಿರಲಿಲ್ಲ. 48 ರನ್ಗಳಿಗೆ 2 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ನಾಯಕ ಶಿಖರ್ ಧವನ್ 13 ಹಾಗೂ ಶುಭ್ಮನ್ ಗಿಲ್ 28 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.
ಈ ಸಂದರ್ಭ ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶನ್ ಜೋಡಿ ಮೂರನೇ ವಿಕೆಟ್‌ಗೆ 161 ರನ್ ಜೊತೆಯಾಟವಾಡಿದರು. 84 ಎಸೆತಗಳಲ್ಲಿ 4 ಬೌಂಡರಿ ಹಾಗೂ 7 ಸಿಕ್ಸರ್ ನೆರವಿನಿಂದ 93 ರನ್ ಬಾರಿಸಿದ ಕಿಶನ್ 7 ರನ್ ಅಂತರದಲ್ಲಿ ಶತಕವನ್ನು ಮಿಸ್ ಮಾಡಿಕೊಂಡರು. ಅಜೇಯ ಆಟವಾಡಿದ ಶ್ರೇಯಸ್ ಅಯ್ಯರ್ (113) ಭರ್ಜರಿ ಶತಕ ದಾಖಲಿಸಿ ಸಂಭ್ರಮಿಸಿದರು.
ಕಿಶನ್ ನಿರ್ಗಮನದ ಬಳಿಕ ಬಂದ ಸಂಜು ಸ್ಯಾಮ್ಸನ್ 30 ರನ್ ಬಾರಿಸಿ ಅಜೇಯರಾಗುಳಿದರು. ಶ್ರೇಯಸ್ ಅಯ್ಯರ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಚಿಕೊಂಡರು.